ಬೆಂಗಳೂರು, ಮಾರ್ಚ್ 03: ಒಂದು ಕಡೆ ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದ ಜನತೆಗೆ ರಾಜ್ಯ ಸರ್ಕಾರವು ಮತ್ತೊಂದು ‘ದರ ಏರಿಕೆ’ಯ ಶಾಕ್ ನೀಡಲು ಮುಂದಾಗಿದೆ. ಮುಂಬರುವ ರಾಜ್ಯ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿಯಾಗಿ ಒಂದು ರೂಪಾಯಿ ಮಾರಾಟ ತೆರಿಗೆ (Sales Tax) ಅಥವಾ ಸೆಸ್ ವಿಧಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.
ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರದ ಖಜಾನೆಯ ಮೇಲೆ ಭಾರಿ ಒತ್ತಡ ಬಿದ್ದಿದೆ. ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಅವರು ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಸುಳಿವು ನೀಡಿದ್ದರು. ವಿವಿಧ ಇಲಾಖೆಗಳಿಗೆ ನೀಡಲಾಗಿರುವ ರಾಜಸ್ವ ಸಂಗ್ರಹಣೆಯ ಗುರಿ ಈಗಾಗಲೇ ಮಿತಿ ಮೀರಿದೆ. ಹೀಗಾಗಿ, ಹೊಸ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸಂಪನ್ಮೂಲ ಕ್ರೋಡೀಕರಿಸಲು ಇಂಧನ ದರ ಏರಿಕೆಯೇ ಅನಿವಾರ್ಯ ಎಂಬ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಇಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಿಎಂ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸುತ್ತಿದ್ದಾರೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 1 ರೂಪಾಯಿ ಹೆಚ್ಚುವರಿ ತೆರಿಗೆ ವಿಧಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರಲಿದೆ ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು. ಆದರೆ, ಲೋಕಸಭಾ ಚುನಾವಣೆಯ ನಂತರ ಈಗಾಗಲೇ ಒಮ್ಮೆ ಬೆಲೆ ಏರಿಕೆ ಮಾಡಲಾಗಿದ್ದು, ಈಗ ಮತ್ತೆ ದರ ಹೆಚ್ಚಿಸಿದರೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಬಹುದು ಎಂಬ ಆತಂಕವೂ ಸರ್ಕಾರಕ್ಕಿದೆ.
2024ರಲ್ಲಿ ಸಿದ್ದರಾಮಯ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ. 29.84ಕ್ಕೆ ಏರಿಕೆ ಮಾಡಿತ್ತು. ಆ ಸಂದರ್ಭದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿತ್ತು. ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ತೆರಿಗೆ ಕಡಿಮೆ ಇದೆ ಎಂದು ಅಂದು ಸಿಎಂ ಸಮರ್ಥಿಸಿಕೊಂಡಿದ್ದರು. ಈಗ ಬಜೆಟ್ ಅಧಿವೇಶನಕ್ಕೆ ಕೇವಲ 4 ದಿನ ಬಾಕಿ ಇರುವಾಗ ಮತ್ತೆ ಇಂತಹದ್ದೇ ಪ್ರಸ್ತಾವನೆ ಮುನ್ನೆಲೆಗೆ ಬಂದಿರುವುದು ವಾಹನ ಸವಾರರ ನಿದ್ದೆ ಗೆಡಿಸಿದೆ.
ಜನಸಾಮಾನ್ಯರ ಮೇಲೆ ಪರಿಣಾಮ
ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಸುಮಾರು ₹103.37 ಹಾಗೂ ಡೀಸೆಲ್ ₹90.99 ರಷ್ಟಿದೆ. ಒಂದು ವೇಳೆ ಸರ್ಕಾರ 1 ರೂಪಾಯಿ ಹೆಚ್ಚಳ ಮಾಡಿದರೆ, ಅದು ಕೇವಲ ಇಂಧನಕ್ಕೆ ಸೀಮಿತವಾಗುವುದಿಲ್ಲ. ಡೀಸೆಲ್ ದರ ಏರಿಕೆಯಾದಲ್ಲಿ ಸರಕು ಸಾಗಣೆ ವೆಚ್ಚ (Logistics cost) ಹೆಚ್ಚಳವಾಗಿ, ತರಕಾರಿ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಲಿದೆ.
ಯುದ್ಧದ ಕಾರ್ಮೋಡ ಮತ್ತು ಸರ್ಕಾರದ ತೆರಿಗೆ ನೀತಿಯ ನಡುವೆ ಸಿಲುಕಿರುವ ಜನಸಾಮಾನ್ಯರಿಗೆ ಈ ಬಾರಿಯ ಬಜೆಟ್ ಸಿಹಿ ನೀಡುತ್ತದೋ ಅಥವಾ ದರ ಏರಿಕೆಯ ಕಹಿ ನೀಡುತ್ತದೋ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.





