63% ಭ್ರಷ್ಟಾಚಾರ BJP ಕಾಲದ್ದು: ಆರ್. ಅಶೋಕ್‌ಗೆ ಸಿಎಂ ಸಿದ್ದರಾಮಯ್ಯ ಕೌಂಟರ್

Untitled design 2025 12 05T083015.919

ಬೆಂಗಳೂರು: ರಾಜ್ಯದಲ್ಲಿ 63% ಭ್ರಷ್ಟಾಚಾರ ನಡೆದಿದೆ ಎಂಬ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ಅದನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೊರುವ ಪ್ರಯತ್ನ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಾವೇ ತಮ್ಮ ಕಾಲಿಗೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. 63% ಭ್ರಷ್ಟಾಚಾರ ಬಿಜೆಪಿ ಕಾಲದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಟೀಕೆ ಮಾಡಿದ್ದಾರೆ.

ಉಪಲೋಕಾಯುಕ್ತ ಬಿ.ವೀರಪ್ಪ ಅವರು ಉಲ್ಲೇಖಿಸಿದ 63% ಭ್ರಷ್ಟಾಚಾರದ ಅಂಕಿ ಅಂಶಗಳು 2019ರ ನವೆಂಬರ್‌ನಲ್ಲಿ ನೀಡಿದ ವರದಿಯಲ್ಲಿದೆ. ಆ ವರದಿ ಸಲ್ಲಿಸಿದ ಸಮಯದಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಆದ್ದರಿಂದ, “63% ಭ್ರಷ್ಟಾಚಾರ” ಎನ್ನುವ ಆರೋಪ ಕಾಂಗ್ರೆಸ್‌ ಸರ್ಕಾರದ ವಿರುದ್ಧವಲ್ಲ, ಬಿಜೆಪಿ ಕಾರ್ಯಕಾಲದ ಬಗ್ಗೆ ಎಂಬುದು ಸ್ಪಷ್ಟವಾಗಿದೆ. ಆದರೆ ವಿಷಯವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಅಶೋಕ್ ಅವರು ತಾವೇ ತಮ್ಮ ಕಾಲಿಗೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ ಎಂದು ಸಿಎಂ ಖಂಡಿಸಿದ್ದಾರೆ.

ಕೋರೋನಾ ಮಹಾಮಾರಿ ಸಮಯದಲ್ಲಿ ಜನರು ಆಸ್ಪತ್ರೆ ಹಾಸಿಗೆಗಾಗಿ ಹತಾಶರಾಗಿದ್ದಾಗಲೂ ವೆಂಟಿಲೇಟರ್ ಖರೀದಿ, ಮಾಸ್ಕ್, ಸ್ಯಾನಿಟೈಸರ್, ಐಸಿಯು ಸೌಲಭ್ಯ ವಿದ್ರೋಹ ಸೇರಿದಂತೆ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದರು. “ಪ್ರತಿ ಇಲಾಖೆಯಲ್ಲಿ ಕನಿಷ್ಠ 40% ಕಮಿಷನ್ ಆಟವಾಡುತ್ತಿತ್ತು” ಎಂದು ಸಿಎಂ ಭಾರೀ ಆರೋಪ ಮಾಡಿದರು.

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಘಟನೆಯನ್ನು ಉಲ್ಲೇಖಿಸಿದ ಸಿಎಂ, “ಅಂದಿನ ಸಚಿವ ಈಶ್ವರಪ್ಪರ ಒತ್ತಡಕ್ಕೆ ಬೇಸತ್ತು ಅವರು ಜೀವ ಕಳೆದುಕೊಂಡರು. ಈ ಘಟನೆಯು ಬಿಜೆಪಿ ಸರ್ಕಾರದ ಭ್ರಷ್ಟಾಡಳಿತದ ಭೀಕರ ಮುಖವನ್ನು ತೋರಿಸಿತು” ಎಂದು ವಾಗ್ದಾಳಿ ನಡೆಸಿದರು.

ನೀರಾವರಿ ಇಲಾಖೆಯ ಭದ್ರಾ ಮೇಲ್ದಂಡ ಯೋಜನೆ ಮತ್ತು ಕಾವೇರಿ ನೀರಾವರಿ ನಿಗಮಗಳಲ್ಲಿ ಸುಮಾರು ₹20,000 ಕೋಟಿ ಮೌಲ್ಯದ ಅಕ್ರಮ ನಡೆದಿದೆ ಎಂಬುದನ್ನು ಸ್ವತಃ ಬಿಜೆಪಿ ಹಿರಿಯ ನಾಯಕ ಹಾಗೂ ಈಗ ವಿಜಯೇಂದ್ರ ಅವರ ಪಕ್ಷದ ಅಧ್ಯಕ್ಷರೂ ಆಗಿರುವ ಹೆಚ್. ವಿಶ್ವನಾಥ್ ಅವರು ಬಹಿರಂಗಪಡಿಸಿದ್ದನ್ನೂ ಸಿಎಂ ನೆನಪಿಸಿದರು.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕರ ಆಪ್ತರು, ಪರಿಚಿತರು ಜೈಲು ಸೇರಿ ಬಂದಿದ್ದಾರೆ. “ಇವೆಲ್ಲವನ್ನೂ ಮರೆತು ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುವುದು ಎಷ್ಟು ತಾರತಮ್ಯ?” ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ “ನ ಖಾವೂಂಗಾ, ನ ಖಾನೆ ದೂಂಗಾ” ಘೋಷಣೆಯನ್ನೂ ಸಿಎಂ ಎತ್ತಿ ತೋರಿಸಿದರು. “ಈ ಘೋಷಣೆಯಾದ ಮೇಲೆ ಭಾರತ ಟ್ರಾನ್ಸ್‌ಪರೆನ್ಸಿ ಇಂಟರ್ನ್ಯಾಷನಲ್‌ನ ಭ್ರಷ್ಟಾಚಾರ ಸೂಚ್ಯಂಕದಲ್ಲಿ 96ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಉತ್ತರ ಕೊಡಬೇಕಾದವರು ಆರ್. ಅಶೋಕ್ ಅವರೇ ಹೊರತು ನಾವಲ್ಲ,” ಎಂದು ಹೇಳಿದರು.

ಆರ್. ಅಶೋಕ್ ಅವರ ಚುಟುಕು ರಾಜಕೀಯಕ್ಕೆ ಉತ್ತರಿಸಿದ ಸಿಎಂ, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೇಮಕಾತಿಯಿಂದ ವರ್ಗಾವಣೆಯವರೆಗೆ ಪಾರದರ್ಶಕ ವ್ಯವಸ್ಥೆ ಜಾರಿಗೆ ತಂದಿದೆ. ಹಣಕಾಸಿನ ದುರುಪಯೋಗಕ್ಕೆ ಅವಕಾಶವಿಲ್ಲದಂತೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ಆದರೆ, ನೀವು ಬಿಟ್ಟು ಹೋದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಸಾದ್ಯವಿಲ್ಲ. ಸ್ವಲ್ಪ ಸಮಯ ಕೊಡಿ, ನಾವು ಸರಿಪಡಿಸುತ್ತೇವೆ” ಎಂದು ಭರವಸೆ ನೀಡಿದರು.

Exit mobile version