ಸರ್ಕಾರದ 26 ತಿಂಗಳ ಹಿಂಬಾಕಿ ಒಪ್ಪಿಗೆ ನಡುವೆಯೂ ನಾಳೆ ‘ಬೆಂಗಳೂರು ಚಲೋ’ ಫಿಕ್ಸ್!

ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳಾದ ವೇತನ ಪರಿಷ್ಕರಣೆ ಹಾಗೂ ಹಿಂಬಾಕಿ ವೇತನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದರೂ, ನಿಗದಿಯಂತೆ ಫೆಬ್ರವರಿ 19ರಂದು ‘ಬೆಂಗಳೂರು ಚಲೋ’ ಮುಷ್ಕರ ನಡೆಸುವುದಾಗಿ ನೌಕರರ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ. ಸರ್ಕಾರದ ನಿರ್ಧಾರ ನಮಗೆ ಸಂಪೂರ್ಣ ತೃಪ್ತಿಕರವಾಗಿಲ್ಲ ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ.

ಸಾರಿಗೆ ನೌಕರರ ಮುಖಂಡ ಜಗದೀಶ್ ಮಾತನಾಡಿ, “ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಆದೇಶ ನಮಗೆ ಲಭಿಸಿಲ್ಲ. 38 ತಿಂಗಳ ಹಿಂಬಾಕಿ ವೇತನ ಪಾವತಿಸಬೇಕೆಂಬ ನಮ್ಮ ಬೇಡಿಕೆ ಮುಂದುವರಿದೇ ಇದೆ. 26 ತಿಂಗಳ ಹಿಂಬಾಕಿ ಮಾತ್ರ ಬಿಡುಗಡೆ ಮಾಡುವ ನಿರ್ಧಾರ ಸಾಕಾಗುವುದಿಲ್ಲ” ಎಂದು ಹೇಳಿದ್ದಾರೆ.

ಫೆಬ್ರವರಿ 19ರಂದು ಬೆಳಗ್ಗೆ 5ರಿಂದ 10 ಸಾವಿರಕ್ಕೂ ಅಧಿಕ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೇರಿ ಪ್ರತಿಭಟನೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

26 ತಿಂಗಳ ಹಿಂಬಾಕಿಗೆ ಸರ್ಕಾರ ಒಪ್ಪಿಗೆ

ಸಾರಿಗೆ ನೌಕರರ ಒತ್ತಾಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. 2025ರ ಏಪ್ರಿಲ್ 1ರಿಂದ ಪರಿಷ್ಕೃತ ವೇತನ ಜಾರಿಗೊಳಿಸುವುದಾಗಿ ಘೋಷಿಸಲಾಗಿದೆ. ಜೊತೆಗೆ 38 ತಿಂಗಳ ಪೈಕಿ 26 ತಿಂಗಳ ಹಿಂಬಾಕಿ ವೇತನವಾಗಿ ₹1271.92 ಕೋಟಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದ್ದು, “ವೇತನದಲ್ಲಿ ಎಷ್ಟು ಪ್ರಮಾಣದ ಏರಿಕೆ ಮಾಡಬೇಕು ಎಂಬುದರ ಕುರಿತು ಸಂಘಟನೆಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

38 ತಿಂಗಳ ಹಿಂಬಾಕಿಗೆ ಪಟ್ಟು

ಆದರೆ ಸಾರಿಗೆ ನೌಕರರು 38 ತಿಂಗಳ ಸಂಪೂರ್ಣ ಹಿಂಬಾಕಿ ಪಾವತಿ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ. 2024ರಿಂದಲೇ ವೇತನ ಪರಿಷ್ಕರಣೆ ಆಗಬೇಕೆಂಬುದು ನಮ್ಮ ಕನಸಾಗಿತ್ತು. ಕಾರ್ಮಿಕ ಮುಖಂಡ ದಿವಂಗತ ಅನಂತ ಸುಬ್ಬರಾವ್ ಅವರ ಕನಸು ಕೂಡ ಇದೇ ಆಗಿತ್ತು ಎಂದು ಸಂಘಟನೆಗಳ ನಾಯಕರು ಹೇಳಿದ್ದಾರೆ.

ಸರ್ಕಾರದ ನಿರ್ಧಾರದಿಂದ ಸಿಬ್ಬಂದಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ ಎಂದು ಅವರು ಆರೋಪಿಸಿದ್ದಾರೆ. ಸಂಪೂರ್ಣ ಹಿಂಬಾಕಿ ನೀಡದೆ ಭಾಗಶಃ ಮೊತ್ತ ಬಿಡುಗಡೆ ಮಾಡುವುದು ನ್ಯಾಯಸಮ್ಮತವಲ್ಲ ಎಂಬುದು ನೌಕರರ ವಾದವಾಗಿದೆ.

ಮುಷ್ಕರದಿಂದ ಸಾರಿಗೆ ವ್ಯತ್ಯಯ ಸಾಧ್ಯತೆ

‘ಬೆಂಗಳೂರು ಚಲೋ’ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾವಿರಾರು ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗುವ ನಿರೀಕ್ಷೆಯಿದ್ದು, ಪ್ರಯಾಣಿಕರಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ. ಶಾಲೆ, ಕಾಲೇಜು, ಕಚೇರಿ ಸಿಬ್ಬಂದಿ ಸೇರಿದಂತೆ ಸಾಮಾನ್ಯ ಜನರಿಗೆ ಪರಿಣಾಮ ಬೀಳಬಹುದು.

ರಾಜ್ಯ ಸರ್ಕಾರ ಮುಷ್ಕರ ತಪ್ಪಿಸಲು ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಕೆಲ ಬೇಡಿಕೆಗಳಿಗೆ ಸ್ಪಂದನೆ ನೀಡಿದ್ದರೂ, ಸಂಪೂರ್ಣ ತೃಪ್ತಿ ವ್ಯಕ್ತಪಡಿಸದ ನೌಕರರು ತಮ್ಮ ಹೋರಾಟವನ್ನು ಮುಂದುವರಿಸಲು ಸಜ್ಜಾಗಿದ್ದಾರೆ.

Exit mobile version