ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2026-27ನೇ ಸಾಲಿನ ಕೇಂದ್ರ ಬಜೆಟ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಜೆಟ್ ನಿರಶಾದಾಯಕವಾಗಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ. ನಾವು ಅನೇಕ ಮಹತ್ವದ ಯೋಜನೆಗಳಿಗೆ ಅನುದಾನ ಕೋರಿದ್ದೆವು, ಆದರೆ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯ ಮಾಡಿದೆ.
ಬಜೆಟ್‌ನಲ್ಲಿ ಕರ್ನಾಟಕದ ಪಾಲಿನ ಬಗ್ಗೆ ಮಾತನಾಡುತ್ತಾ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಏನಾದರೂ ಕೊಟ್ಟಿದ್ದರೆ ಅದು ಕೇವಲ ಚೊಂಬು ಮಾತ್ರ. ನಾವು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಅತಿ ಹೆಚ್ಚು ಹಣ ನೀಡುತ್ತೇವೆ, ಆದರೆ ಪ್ರತಿಯಾಗಿ ನಮಗೆ ಸಿಗುತ್ತಿರುವುದು ಶೂನ್ಯ. ಇದು ದಕ್ಷಿಣ ಭಾರತದ ರಾಜ್ಯಗಳ ಮೇಲೆ ನಡೆಯುತ್ತಿರುವ ಆರ್ಥಿಕ ದೌರ್ಜನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಕರ್ನಾಟಕ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತವನ್ನು ಈ ಬಜೆಟ್ ಕಡೆಗಣಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕೇಂದ್ರ ಬಜೆಟ್ 2026: ಎತ್ತಿನಹೊಳೆ ಯೋಜನೆಗೆ ಕೈ ಕೊಟ್ಟ ಕೇಂದ್ರ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ತಮ್ಮ ಐತಿಹಾಸಿಕ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ದೇಶದ ಆರ್ಥಿಕತೆಯನ್ನು ಬಲಪಡಿಸುವ ಹಲವು ಘೋಷಣೆಗಳು ಈ ಬಜೆಟ್‌ನಲ್ಲಿ ಕಂಡುಬಂದರೂ, ಕರ್ನಾಟಕದ ಪಾಲಿಗೆ ಇದು ಮತ್ತೊಮ್ಮೆ ನಿರಾಸೆಯ ಬಜೆಟ್ ಆಗಿ ಪರಿಣಮಿಸಿದೆ. ವಿಶೇಷವಾಗಿ ದಶಕಗಳ ಕನಸಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಅಥವಾ ಅನುದಾನದ ಘೋಷಣೆ ಇಲ್ಲದಿರುವುದು ರಾಜ್ಯದ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಪಶ್ಚಿಮ ಘಟ್ಟಗಳ ನೇತ್ರಾವತಿ ನದಿಯ ಉಪನದಿಗಳಾದ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗಡಹಳ್ಳದಲ್ಲಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೋಟ್ಯಂತರ ಜನರು ಈ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟಿಕೊಂಡಿದ್ದರು.





