ಐದು ವರ್ಷ ನಾನೇ ಸಿಎಂ, ಬದಲಾವಣೆಯ ಮಾತೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ

Untitled design 2025 07 10t123627.820

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ಹೇಳಿಕೆ ನೀಡಿದ್ದಾರೆ. “ನಾನೇ 5 ವರ್ಷ ಸಿಎಂ ಆಗಿ ಕಾರ್ಯನಿರ್ವಹಿಸುತ್ತೇನೆ, ನಾಯಕತ್ವ ಬದಲಾವಣೆ ಎಂದೂ ಇಲ್ಲ” ಎಂದು ಅವರು ಖಚಿತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದು, 2028ರ ಚುನಾವಣೆವರೆಗೂ ತಮ್ಮ ನಾಯಕತ್ವವೇ ಮುಂದುವರೆಯುವುದಾಗಿ ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ಕೆಲವು ಕಾಂಗ್ರೆಸ್ ಶಾಸಕರು ಡಿಕೆ ಶಿವಕುಮಾರ್ ಅವರಿಗೆ ಬೆಂಬಲ ನೀಡಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು, ಅವರನ್ನು ಬೆಂಬಲಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. “ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಂತಹ ನಿರ್ಧಾರ ಬಂದರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪವರ್ ಶೇರಿಂಗ್ ವಿವಾದಕ್ಕೆ ಅಂತ್ಯ

ಕೆಲವು ವರದಿಗಳು ಕಾಂಗ್ರೆಸ್ ಒಳಗೆ ಪವರ್ ಶೇರಿಂಗ್ ಚರ್ಚೆ ನಡೆದಿದೆ ಎಂದು ಹೇಳುತ್ತಿದ್ದರೂ, ಸಿದ್ದರಾಮಯ್ಯ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. “ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆದಿಲ್ಲ. ಹೈಕಮಾಂಡ್ ಕೂಡ ಇದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ” ಎಂದು ಅವರು ತಿಳಿಸಿದ್ದಾರೆ.

ಹೈಕಮಾಂಡ್ ನಿರ್ಧಾರವೇ ಅಂತಿಮ

ಕಾಂಗ್ರೆಸ್ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ, ಎಲ್ಲಾ ನಾಯಕರು ಅದನ್ನು ಒಪ್ಪಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. “ಡಿಕೆ ಶಿವಕುಮಾರ್ ಸಹ ಹೈಕಮಾಂಡ್ ನಿರ್ಧಾರವನ್ನು ಅನುಸರಿಸಬೇಕು. ಆದರೆ ಸಿಎಂ ಸ್ಥಾನದಿಂದ ನಾನು ಇಳಿಯುವ ಬಗ್ಗೆ ಯಾರೂ ಹೇಳಿಲ್ಲ” ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. “2028ರವರೆಗೆ ನಮ್ಮ ಸರ್ಕಾರ ಜನಹಿತದ ಕೆಲಸ ಮಾಡುತ್ತದೆ. ನಾವು ಯಾವುದೇ ರಾಜಕೀಯ ವಿವಾದಗಳಿಗೆ ಗಮನ ಕೊಡುವುದಿಲ್ಲ” ಎಂದು ಹೇಳಿದ್ದಾರೆ.

Exit mobile version