ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಸಿದ್ದರಾಮಯ್ಯ, “ಕುರುಬರನ್ನು ST ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದು ಬಿಜೆಪಿ ಸರ್ಕಾರ. ಆ ಶಿಫಾರಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ” ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ SC/ST ಸಮುದಾಯಗಳ ಅಭಿವೃದ್ಧಿಗಾಗಿ ತಮ್ಮ ಸರ್ಕಾರಗಳು ಮಾಡಿದ ಕಾರ್ಯಗಳನ್ನು ಎತ್ತಿ ತೋರಿಸಿದರು. “SC/ST ಸಮುದಾಯಗಳಿಗೆ ಜನಸಂಖ್ಯೆ ಪ್ರಮಾಣದಷ್ಟೇ ಅಭಿವೃದ್ಧಿ ಬಜೆಟ್ನಲ್ಲೂ ಹಣ ಮೀಸಲಿಡಲು ಕಾಯ್ದೆ ಮಾಡಿದ್ದು ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. SC/ST ಸಮುದಾಯಗಳಿಗೆ ಹೋಬಳಿಗೊಂದರಂತೆ ವಸತಿ ಶಾಲೆ, ಮೊರಾರ್ಜಿ ಶಾಲೆಗಳನ್ನು ಮಾಡಿದ್ದು ಇದೇ ಸಿದ್ದರಾಮಯ್ಯ. ಹೀಗಾಗಿ ಈ ಇತಿಹಾಸವನ್ನೆಲ್ಲಾ ಚೆನ್ನಾಗಿ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
ಸಮುದಾಯದ ಜನರು ತಮ್ಮ ಮತದಾನದ ನಿರ್ಧಾರಗಳನ್ನು ಇತಿಹಾಸದ ಆಧಾರದ ಮೇಲೆ ಮಾಡಬೇಕು. ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಇದ್ದಾರೋ ಅವರ ಪರವಾಗಿ ವಾಲ್ಮೀಕಿ ಸಮುದಾಯ ನಿಲ್ಲಬೇಕು ಎಂದು ಅವರು ಜನರಿಗೆ ಕರೆ ನೀಡಿದರು.ಈ ಹೇಳಿಕೆಯು ರಾಜ್ಯದ ರಾಜಕೀಯ ವಲಯಗಳಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ವಾಲ್ಮೀಕಿ ಸಮುದಾಯದ ಮತಗಳು ರಾಜ್ಯದ ಅನೇಕ ನಿರ್ಣಾಯಕ ಕ್ಷೇತ್ರಗಳಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿವೆ.





