ಧಾರವಾಡ (ಡಿ.27): ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಬಸ್ ಬೆಂಕಿಗೀಡಾಗುವುದು, ಮನೆಗಳಲ್ಲಿ ಅಗ್ನಿ ಅವಘಡಗಳು, ಅನಿಲ ಸಿಲಿಂಡರ್ ಸ್ಫೋಟದಂತಹ ಸರಣಿ ಘಟನೆಗಳು ಜನರಲ್ಲಿ ಆತಂಕ ಮೂಡಿಸುತ್ತಿವೆ. ಇದೀಗ ಧಾರವಾಡದಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಧಾರವಾಡ ನಗರದ ಕೋರ್ಟ್ ವೃತ್ತದಿಂದ ಕೆಸಿಡಿ ಕಾಲೇಜಿನ (KCD College) ದಿಕ್ಕಿಗೆ ಹೊರಟಿದ್ದ ಕಾರಿನ ಎಂಜಿನ್‌ನಿಂದ ಹೊಗೆ ಕಾಣಿಸಿಕೊಂಡಿತ್ತು. ನಂತರ ಏಕಾಏಕಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಕಾರು ಅಳ್ನಾವರ ತಾಲೂಕಿನ ನಿಜಾಮುದ್ದೀನ ಎಂಬುವರಿಗೆ ಸೇರಿದೆ. ಕಾರಿನ ನೋಂದಣಿ ಸಂಖ್ಯೆ GA 06 D 3919 ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ನಿಜಾಮುದ್ದೀನ ಎಚ್ಚರಿಕೆ ವಹಿಸಿ ತಕ್ಷಣ ಕಾರಿನಿಂದ ಹೊರಬಂದಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾರಿನಲ್ಲಿ ಇತರ ಪ್ರಯಾಣಿಕರು ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನಡು ರಸ್ತೆಯಲ್ಲೇ ಕಾರು ಧಗಧಗನೆ ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದರು. ಕೆಲವರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ತ್ವರಿತ ಕಾರ್ಯಾಚರಣೆ ನಡೆಸಿದರು. ಸಾಕಷ್ಟು ಪ್ರಯತ್ನದ ಬಳಿಕ ಬೆಂಕಿಯನ್ನು ನಂದಿಸಲಾಯಿತು.
ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು: ಇಬ್ಬರು ಸಜೀವ ದಹನ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗೇಟ್ ಬಳಿ ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಈ ಘಟನೆಯಲ್ಲಿ ಕಾರು ಹೊತ್ತಿ ಉರಿದಿದ್ದು, ಇಬ್ಬರು ಸಜೀವ ದಹನರಾಗಿದ್ದಾರೆ. ಆಂಧ್ರ ಪ್ರದೇಶ ಮೂಲದ ಧನಂಜಯ ರೆಡ್ಡಿ (31) ಮತ್ತು ಕಲಾವತಿ (35) ಎಂಬ ಇಬ್ಬರು ಮೃತರಾಗಿದ್ದು, ಕಾರಿನಲ್ಲಿದ್ದ ಇತರೇ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಸಮಯದಲ್ಲಿ ಬಸ್ ಪಲ್ಟಿಯಾಗಿ ಬಿದ್ದಿದ್ದು, ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮದನಪಲ್ಲಿ ನಿವಾಸಿಗಳಾದ ಇಬ್ಬರು ವ್ಯಕ್ತಿಗಳು ಸುಟ್ಟುಕರಕಲಾಗಿದ್ದಾರೆ. ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸುರಕ್ಷಿತವಾಗಿರುವುದು ತಿಳಿದು ಬಂದಿದೆ. ಪೊಲೀಸರು ಘಟನೆಯ ಕಾರಣಗಳನ್ನು ವಿವರವಾಗಿ ತನಿಖೆ ಮಾಡುತ್ತಿದ್ದಾರೆ.





