ಶಿವಮೊಗ್ಗ: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಗೃಹಿಣಿ ರಂಜಿತಾ, ಗಣಪತಿ ಹಬ್ಬದ ಸಂದರ್ಭದಲ್ಲಿ ತನ್ನ ತವರು ಮನೆಗೆ ಭೇಟಿ ನೀಡಿದ್ದ ವೇಳೆ, ಮನೆಯ ಜಗುಲಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಂಜಿತಾ ಒಂಬತ್ತು ವರ್ಷಗಳ ಹಿಂದೆ ಆನಂದಪುರ ಬಳಿಯ ಮುರುಘಾಮಠದ ನಿವಾಸಿ ಅರುಣ್ ಎಂಬಾತನನ್ನು ಮದುವೆಯಾಗಿದ್ದರು. ಆದರೆ, ದಾಂಪತ್ಯ ಜೀವನದಲ್ಲಿ ಉಂಟಾದ ಮನಸ್ತಾಪದಿಂದಾಗಿ ಇಬ್ಬರೂ ಬೇರ್ಪಟ್ಟು, ರಂಜಿತಾ ಡಿವೋರ್ಸ್ ಪಡೆದಿದ್ದರು. ಇದಾದ ನಂತರ, ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ರಂಜಿತಾ ಸಾಗರದ ಜೆ.ಪಿ.ನಗರದ ಶಶಿಕುಮಾರ್ ಎಂಬಾತನನ್ನು ಎರಡನೇ ಬಾರಿಗೆ ವಿವಾಹವಾದರು.
ಗಣಪತಿ ಹಬ್ಬದ ಸಂಭ್ರಮಕ್ಕಾಗಿ ರಂಜಿತಾ ತನ್ನ ತವರು ಮನೆಗೆ ಯಡೇಹಳ್ಳಿಗೆ ಬಂದಿದ್ದರು. ಆದರೆ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ, ರಂಜಿತಾ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೌಟುಂಬಿಕ ಕಲಹ ಮತ್ತು ವೈಯಕ್ತಿಕ ಸಮಸ್ಯೆಗಳೇ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.