ಬೆಂಗಳೂರು: ಇಡೀ ಮಲೆನಾಡು ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಸೇವೆ ಸಲ್ಲಿಸುವ ಆರೋಗ್ಯ ಕೇಂದ್ರವನ್ನಾಗಿ ಶಿವಮೊಗ್ಗವನ್ನು ಅಭಿವೃದ್ಧಪಡಿಸಲಾಗುವುದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ಬುಧವಾರ ವಿಕಾಸ ಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್) ಮತ್ತು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಮತ್ತು ಸೇವಾ ವಿತರಣೆ ಹೆಚ್ಚಿಸುವ ಕುರಿತು ಸಚಿವರು ಪರಿಶೀಲನೆ ನಡೆಸಿದರು.
ಶಿವಮೊಗ್ಗ ನಗರವನ್ನು ಪೂರ್ಣ ಪ್ರಮಾಣದ ಪ್ರಾದೇಶಿಕ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಇದೇ ಸಂದರ್ಭದಲ್ಲಿ ಸಚಿವರು ನಿರ್ಧರಿಸಿದರು.
ಬರಲಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಈ ಕೇಂದ್ರವು ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರ ಸಂಪೂರ್ಣ ಆರೋಗ್ಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವೈದ್ಯಕೀಯ ಕಾಲೇಜುಗಳು, ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳು ಸೇರಿದಂತೆ ವೈದ್ಯಕೀಯ ಸಂಸ್ಥೆಗಳ ಸಮೂಹವನ್ನು ಒಳಗೊಂಡಿರುತ್ತದೆ. ಶಿವಮೊಗ್ಗವು ಈಗಾಗಲೇ ಅತ್ಯುತ್ತಮ ರಸ್ತೆ, ರೈಲು ಮತ್ತು ವಾಯು ಸಂಪರ್ಕವನ್ನು ಹೊಂದಿರುವುದರಿಂದ, ನಗರವು ಮಲೆನಾಡು ಪ್ರದೇಶಕ್ಕೆ ಆರೋಗ್ಯ ಕೇಂದ್ರವಾಗಲಿದೆ ಎಂದು ಸಚಿವರು ವಿವರಿಸಿದರು.
“ಕಲಬುರಗಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಆರೋಗ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸಿದಂತೆಯೇ, ಶಿವಮೊಗ್ಗವು ಈಗ ಮಲೆನಾಡಿನ ಪ್ರದೇಶದ ವೈದ್ಯಕೀಯ ಸೇವಾ ಹಬ್ ಆಗಿ ಕಾರ್ಯನಿರ್ವಹಿಸಲಿದೆ” ಎಂದು ಡಾ. ಪಾಟೀಲ್ ಹೇಳಿದರು.
“ಸಿಮ್ಸ್ ಮತ್ತು ಮೆಗ್ಗಾನ್ ಆಸ್ಪತ್ರೆಗಳು ಪ್ರಸ್ತುತ ಕಿಕ್ಕಿರಿದು ತುಂಬಿವೆ ಮತ್ತು ವೈದ್ಯರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹೊರೆಯನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಲು ಹೊಸ ಸ್ಪೆಷಾಲಿಟಿ ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲು ಹೆಚ್ಚಿನ ಹಣವನ್ನು ಹೂಡುತ್ತೇವೆ” ಎಂದು ಸಚಿವರು ಸ್ಪಷ್ಟಪಡಿಸಿದರು.
ಶಿವಮೊಗ್ಗ ಜಿಲ್ಲೆ ಕೇವಲ ಏಳು ತಾಲ್ಲೂಕುಗಳನ್ನು ಹೊಂದಿದ್ದರೂ, ಸಿಮ್ಸ್ ಮತ್ತು ಮೆಗ್ಗಾನ್ ಆಸ್ಪತ್ರೆಗಳಿಗೆ ನೆರೆಯ 26 ತಾಲೂಕುಗಳಿಂದಲೂ ರೋಗಿಗಳು ಬರುತ್ತಾರೆ. ಇದರಿಂದ ಹೊರೆ ಹೆಚ್ಚಿರುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
“ಈ ಒತ್ತಡವನ್ನು ಕಡಿಮೆ ಮಾಡಲು ಮತ್ತು ಗುಣಮಟ್ಟದ ಆರೈಕೆಯನ್ನು ಖಚಿತಪಡಿಸಿಕೊಳ್ಳಲು, ಸುಧಾರಿತ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವುದು ಅವಶ್ಯಕವಾಗಿದೆ” ಎಂದು ಹೇಳಿದರು.
ತಕ್ಷಣದ ನವೀಕರಣಗಳ ಭಾಗವಾಗಿ, ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚುವರಿ ಎಂಆರ್ ಐ ಯಂತ್ರ ಮತ್ತು ಶವ ಸಾಗಿಸುವ ವಾಹನವನ್ನು ಖರೀದಿಸಲು ಸರ್ಕಾರ ಅನುಮೋದನೆ ನೀಡಿದೆ.