ಬೆಂಗಳೂರು: ಚಿತ್ರದುರ್ಗದ ಹಿರಿಯೂರು ಸಮೀಪ ನಡೆದ ಸೀಬರ್ಡ್ ಬಸ್‌ನ ಭೀಕರ ದುರಂತದ ಕಹಿ ನೆನಪುಗಳು ಮಾಸುವ ಮುನ್ನವೇ, ಅದೇ ಸಂಸ್ಥೆಯ ಮತ್ತೊಬ್ಬ ಚಾಲಕನ ನಿರ್ಲಕ್ಷ್ಯ ಬೆಲಕಿಗೆ ಬಂದಿದೆ. ನೂರಾರು ಪ್ರಯಾಣಿಕರ ಪ್ರಾಣವನ್ನು ಒತ್ತೆಯಿಟ್ಟು, ಮದ್ಯದ ಅಮಲಿನಲ್ಲಿ ಬಸ್ ಚಾಲನೆ ಮಾಡುತ್ತಿದ್ದ ಸೀಬರ್ಡ್ ಬಸ್ ಚಾಲಕನನ್ನು ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ:
ರಾಜಧಾನಿ ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಖಾಸಗಿ ಸೀಬರ್ಡ್ ಬಸ್ ಅನ್ನು ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ಸಾಮಾನ್ಯ ತಪಾಸಣೆಯ ಭಾಗವಾಗಿ ತಡೆದರು. ಇತ್ತೀಚೆಗೆ ನಡೆದ ಬಸ್ ಅಪಘಾತಗಳ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ನಗರದಾದ್ಯಂತ ಡ್ರಿಂಕ್ ಅಂಡ್ ಡ್ರೈವ್ (Drink and Drive) ತಪಾಸಣೆಯನ್ನು ತೀವ್ರಗೊಳಿಸಿದ್ದರು. ಈ ವೇಳೆ ಬಸ್ ಚಾಲಕನ ಮೇಲೆ ಅನುಮಾನ ಬಂದು ಆಲ್ಕೋಮೀಟರ್ ಪರೀಕ್ಷೆ ನಡೆಸಿದಾಗ, ಆತ ಮಿತಿಮೀರಿ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ.
ಸೀಬರ್ಡ್ ಬಸ್ ಸಂಸ್ಥೆಯು ಪದೇ ಪದೇ ಇಂತಹ ವಿವಾದಗಳಿಗೆ ಸಿಲುಕುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಿರಿಯೂರು ದುರಂತದಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದರೂ, ಚಾಲಕರು ಮಾತ್ರ ಇಂದಿಗೂ ಎಚ್ಚೆತ್ತುಕೊಂಡಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕುಡಿದ ಅಮಲಿನಲ್ಲಿ ಘಟ್ಟ ಪ್ರದೇಶಗಳನ್ನು ದಾಟಿ ಗೋವಾಕ್ಕೆ ಬಸ್ ಹೊರಟ್ಟಿದ್ದರೆ ಮತ್ತೊಂದು ಅಪಘಾತ ಆಗುವ ಸಾಧ್ಯತೆ ಹೆಚ್ಚಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಉಪ್ಪಾರಪೇಟೆ ಪೊಲೀಸರು ಮಧ್ಯಪಾನ ಮಾಡಿದ್ದ ಚಾಲಕನನ್ನು ವಶಕ್ಕೆ ಪಡೆದು, ಬಸ್ ಅನ್ನು ಜಪ್ತಿ ಮಾಡಿದರು. ಬಳಿಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಂಸ್ಥೆಯ ಕಡೆಯಿಂದ ಮತ್ತೊಬ್ಬ ಚಾಲಕನನ್ನು ಕರೆಸಿ, ಸೂಕ್ತ ತಪಾಸಣೆಯ ನಂತರ ಬಸ್ ಅನ್ನು ಗೋವಾಕ್ಕೆ ಕಳಿಸಿಕೊಡಲಾಯಿತು. ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಲೈಸೆನ್ಸ್ ರದ್ದುಗೊಳಿಸುವಂತೆ ಶಿಫಾರಸು ಮಾಡಲಾಗಿದೆ.
ಖಾಸಗಿ ಬಸ್ ಸಂಸ್ಥೆಗಳು ಲಾಭದ ಹಪಾಹಪಿಗೆ ಬಿದ್ದು ಚಾಲಕರ ಆರೋಗ್ಯ ಮತ್ತು ನಡವಳಿಕೆಯನ್ನು ಸರಿಯಾಗಿ ಪರಿಶೀಲಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ವಾರಾಂತ್ಯದ ಸಮಯದಲ್ಲಿ ಗೋವಾ, ಕಾರವಾರದಂತಹ ಪ್ರವಾಸಿ ತಾಣಗಳಿಗೆ ನೂರಾರು ಜನರು ಈ ಬಸ್‌ಗಳನ್ನು ಅವಲಂಬಿಸುತ್ತಾರೆ. ಆದರೆ ಇಂತಹ ಘಟನೆಗಳು ಪ್ರಯಾಣಿಕರಲ್ಲಿ ಭೀತಿಯನ್ನು ಹುಟ್ಟಿಸಿವೆ. ಈ ಬಗ್ಗೆ ವಾಹನ ಚಾಲಕರು ಸಹ ಗಮನಹರಿಬೇಕಾಗಿದೆ. ಇದರಿಂದ ಎಷ್ಟೋ ಅಪಘಾತಗಳು ತಪ್ಪಲು ಸಹಕಾರಿಯಾಗುತ್ತದೆ.





