ವೃಕ್ಷಮಾತೆ ಎಂಬ ಬಿರುದಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಗೆ ಸ್ಥಳ ನಿಗದಿಯಾಗಿದೆ. ನಾಳೆ (ನವೆಂಬರ್ 15) ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಜ್ಞಾನಭಾರತಿ ಬಳಿಯ ಕಲಾ ಗ್ರಾಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಈ ಮೂಲಕ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆಯಾಗಿದೆ ಎಂಬ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ.
ಶತಾಯುಷಿ ತಿಮ್ಮಕ್ಕ ಅವರ ಅಂತಿಮ ದರ್ಶನಕ್ಕೆ ಹುಲಿಕಲ್ ಮತ್ತು ಬೇಲೂರಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಂಚೆಯೇ ಮದ್ದೂರು ತಾಲೂಕಿನ ಸೋಮನಹಳ್ಳಿ ಸ್ವಗ್ರಾಮ ಅಥವಾ ಇತರ ಸ್ಥಳಗಳಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ವದಂತಿಗಳು ಹರಡಿದ್ದವು. ಆದರೆ ಇದೀಗ ಜ್ಞಾನಭಾರತಿ ಬಳಿ ಕಲಾ ಗ್ರಾಮವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಇಂದು ಮೃತರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ತಿಮ್ಮಕ್ಕ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ನಕಲಿ ಆದೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಸರ್ಕಾರ ಇದನ್ನು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲು ಆದೇಶಿಸಲಾಗಿದ್ದು, ಯಾವುದೇ ರಜೆ ಘೋಷಣೆಯಿಲ್ಲ ಎಂದು ತಿಳಿಸಲಾಗಿದೆ. ಇದರಿಂದ ಎಲ್ಲಾ ಗೊಂದಲಗಳಿಗೆ ಅಂತ್ಯವಾಗಿದೆ.
ಅನಕ್ಷರಸ್ಥೆಯಾಗಿದ್ದ ತಿಮ್ಮಕ್ಕ ಅವರು ಮಕ್ಕಳಿಲ್ಲದ ನೋವನ್ನು ಮರಗಳ ಮೂಲಕ ಮರೆಸಿಕೊಂಡರು. ರಸ್ತೆ ಬದಿಯಲ್ಲಿ 385 ಆಲದ ಮರಗಳನ್ನು ನೆಟ್ಟು, ಅವುಗಳನ್ನೇ ಮಕ್ಕಳಂತೆ ಬೆಳೆಸಿದರು. ಪರಿಸರ ಸಂರಕ್ಷಣೆಯಲ್ಲಿ ಮಾಡಿದ ಮಹತ್ತರ ಕಾರ್ಯಕ್ಕಾಗಿ ಪದ್ಮಶ್ರೀ ಸೇರಿದಂತೆ ಹಲವು ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದವು. ಅವರ ನಿಧನದಿಂದ ಪರಿಸರ ಪ್ರೇಮಿಗಳು ದುಃಖದಲ್ಲಿ ಮುಳುಗಿದ್ದಾರೆ.
ಈ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ, ವೃಕ್ಷಮಾತೆಯನ್ನು ಅಂತಿಮ ನಮನ ಸಲ್ಲಿಸಬಹುದು.





