ವಿಜಯನಗರ: ಜಗತ್ತಿನಲ್ಲೇ ಅತ್ಯಂತ ಅಪರೂಪ ಎನ್ನಲಾಗುವ, ವಿಶಿಷ್ಟ ಬಣ್ಣದ ಚಿರತೆಯೊಂದು ವಿಜಯನಗರದ ಕಾಡೊಂದರಲ್ಲಿ ಪತ್ತೆಯಾಗಿದ್ದು, ಇದಕ್ಕೆ ‘ಚಂದನ ಚಿರತೆ’ (Chandana Chirate) ಎಂದು ನಾಮಕರಣ ಮಾಡಲಾಗಿದೆ.
ಸ್ಟ್ರಾಬೆರಿ ಚಿರತೆ ಈಗ ಚಂದನ ಚಿರತೆ
ಸಾಮಾನ್ಯವಾಗಿ ನಾವು ನೋಡುವ ಚಿರತೆಗಳು ಹಳದಿ ಅಥವಾ ಕಂದು ಮಿಶ್ರಿತ ಮೈಬಣ್ಣ ಹಾಗೂ ಗಾಢ ಕಪ್ಪು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಆದರೆ, ವಿಜಯನಗರದ ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ಸೆರೆಯಾಗಿರುವ ಈ ಚಿರತೆಯು ಕೆಂಪು-ಗುಲಾಬಿ ಮಿಶ್ರಿತ ಬಣ್ಣದ ತುಪ್ಪಳ ಮತ್ತು ಮಾಸಲು ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿದೆ. ಜಾಗತಿಕವಾಗಿ ಇಂತಹ ಬಣ್ಣದ ಚಿರತೆಗಳನ್ನು ‘ಸ್ಟ್ರಾಬೆರಿ ಚಿರತೆ’ (Strawberry Leopard) ಎಂದು ಕರೆಯಲಾಗುತ್ತದೆ. ಆದರೆ, ಹೊಳೆಮತ್ತಿ ನೇಚರ್ ಫೌಂಡೇಶನ್ (HNF) ತಂಡವು ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಗಂಧದ ನಾಡಿನ ಸಂಕೇತವಾಗಿ ಇದಕ್ಕೆ ‘ಚಂದನ ಚಿರತೆ’ ಎಂದು ಹೆಸರಿಟ್ಟಿದೆ.
ಭಾರತದಲ್ಲಿ ಇದು ಎರಡನೇ ಪ್ರಕರಣ:
ಈ ರೀತಿಯ ಬಣ್ಣದ ರೂಪಾಂತರ ಹೊಂದಿರುವ ಚಿರತೆಗಳು ಜಗತ್ತಿನಾದ್ಯಂತ ಬೆರಳಣಿಕೆಯಷ್ಟು ಬಾರಿ ಮಾತ್ರ ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾ ಮತ್ತು ತಾಂಜೇನಿಯಾದಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದವು. ಭಾರತದ ಮಟ್ಟಿಗೆ ಹೇಳುವುದಾದರೆ, 2021ರಲ್ಲಿ ರಾಜಸ್ಥಾನದ ರಣಕಪುರದಲ್ಲಿ ಇಂತಹ ಚಿರತೆ ಮೊದಲ ಬಾರಿಗೆ ಪತ್ತೆಯಾಗಿತ್ತು. ಈಗ ಕರ್ನಾಟಕದ ವಿಜಯನಗರದಲ್ಲಿ ಪತ್ತೆಯಾಗಿರುವುದು ಭಾರತದ ಎರಡನೇ ಮತ್ತು ಕರ್ನಾಟಕದ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಎಚ್‌ಎನ್‌ಎಫ್ ತಂಡದ ಸಾಧನೆ:
ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರ ನೇತೃತ್ವದ ಹೊಳೆಮತ್ತಿ ನೇಚರ್ ಫೌಂಡೇಶನ್ ತಂಡವು ಕಳೆದ ಕೆಲವು ಸಮಯದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ವನ್ಯಜೀವಿಗಳ ಗಣತಿ ಮತ್ತು ಅಧ್ಯಯನ ನಡೆಸುತ್ತಿದೆ. ಈ ತಂಡ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಈ ಸುಂದರ ಚಿರತೆ ಹಲವು ಬಾರಿ ಸೆರೆಯಾಗಿದೆ. ಸಂದೇಶ್ ಅಪ್ಪು ನಾಯ್ಕ, ಶ್ರವಣ್ ಸುತಾರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಪರಿಣತರು ಈ ಅಪರೂಪದ ಜೀವಿಯ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ.
ಪರಿಸರ ವ್ಯವಸ್ಥೆಯಲ್ಲಿ ಇಂತಹ ಬಣ್ಣದ ರೂಪಾಂತರಗಳು (Erythrism) ಅತ್ಯಂತ ಅಪರೂಪವಾಗಿದ್ದು, ಇದು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಸಂಶೋಧನೆಯಾಗಿದೆ. ಈ ಚಂದನ ಚಿರತೆಯ ಆಗಮನ ವಿಜಯನಗರದ ಅರಣ್ಯದ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುತ್ತಿದೆ.





