ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಸೋಮಲಾಪುರದ ಅಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಅಕ್ರಮ ಚಟುವಟಿಕೆಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಅರೆಸ್ಟ್
ಬಂಧಿತ ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಆಜಂ ಸೊಯಲ್ ಮತ್ತು ಮೊಹಮ್ಮದ್ ಶಾಬಾಜ್ ಎಂದು ಗುರುತಿಸಲಾಗಿದೆ. ಆಜಂ ಸೊಯಲ್ ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದಾನೆ, ಶಾಬಾಜ್ ಲಾರಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸುಲಭವಾಗಿ ಹಣ ಸಂಪಾದಿಸುವ ಆಸೆಗೆ ಬಿದ್ದ ಈ ಇಬ್ಬರೂ ಗಾಂಜಾ ಮಾರಾಟ ಮಾಡಿದ್ದಾರೆ.
ಪೊಲೀಸರ ಮಿಂಚಿನ ದಾಳಿ
ಸೋಮಲಾಪುರದ ಅಂಬಾದೇವಿ ದೇವಾಲಯದ ಹಳೆಯ ಯಾತ್ರಿ ನಿವಾಸದ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಾ, ಗಾಂಜಾವನ್ನು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಎಚ್ಚೆತ್ತ ಸಿಂಧನೂರು ಪೊಲೀಸರು ತಂಡ ರಚಿಸಿಕೊಂಡು ಸ್ಥಳದ ಮೇಲೆ ಮಿಂಚಿನ ದಾಳಿ ನಡೆಸಿದರು. ಈ ವೇಳೆ ಗಾಂಜಾ ಸಮೇತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.
ಜಪ್ತಿಯಾದ ಮಾಲು ಎಷ್ಟು ?
ಬಂಧಿತ ಆರೋಪಿಗಳಿಂದ ಪೊಲೀಸರು ಬರೋಬ್ಬರಿ 11 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 1.10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಗಾಂಜಾ ಪ್ಯಾಕ್ ಮಾಡಲು ಬಳಸುತ್ತಿದ್ದ ಕಾಗದದ ಪೊಟ್ಟಣಗಳು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಮಾಗಡಿ ರಸ್ತೆಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾ*ವು!
ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ರಸ್ತೆ ಅಪಘಾತಗಳ ಸರಣಿ ಮುಂದುವರಿದಿದ್ದು, ನಗರದ ಮಾಚೋಹಳ್ಳಿ ಬಳಿ ಬೊಲೆರೋ ಮತ್ತು ಸ್ವಿಫ್ಟ್ ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಯುವಕರನ್ನು ಚನ್ನಪಟ್ಟಣ ಮೂಲದ ಗಗನ್ (27) ಮತ್ತು ಬೆಂಗಳೂರಿನ ದರ್ಶನ್ (26) ಎಂದು ಗುರುತಿಸಲಾಗಿದೆ. ಗಗನ್ ಅವರು ಮಾದನಾಯಕನಹಳ್ಳಿ ಬಳಿಯ ಖಾಸಗಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇನ್ನು ದರ್ಶನ್ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ತಮ್ಮ ಸ್ನೇಹಿತನ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ವೇಗವಾಗಿ ಬಂದ ಬೊಲೆರೋ ವಾಹನ ಮತ್ತು ಸ್ವಿಫ್ಟ್ ಕಾರು ಪರಸ್ಪರ ಡಿಕ್ಕಿಯಾಗಿವೆ. ಡಿಕ್ಕಿಯ ರಭಸ ಹೆಚ್ಚಿದ್ದರಿಂದ ಎರಡೂ ವಾಹನಗಳ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಗನ್ ಮತ್ತು ದರ್ಶನ್ ಇಬ್ಬರೂ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.





