ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಸಮಿರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ರೈತರ ಆಕ್ರೋಶ ಭುಗಿಲೆದ್ದು, ಕಬ್ಬು ತುಂಬಿದ್ದ ಸುಮಾರು 50 ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆಯು ಕಾರ್ಖಾನೆಯ ಒಳಗೆ ಮತ್ತು ಹೊರಗೆ ಜಮಾಯಿಸಿದ್ದ ಎರಡು ಗುಂಪುಗಳ ನಡುವೆ ಉಂಟಾದ ಮಾತಿನ ಚಕಮಕಿಯಿಂದ ಆರಂಭವಾಗಿ, ಕಲ್ಲು ತೂರಾಟದೊಂದಿಗೆ ತೀವ್ರಗೊಂಡಿತು.
ಸಮಿರವಾಡಿ ಸಕ್ಕರೆ ಕಾರ್ಖಾನೆಯ ಗೇಟ್ ಬಳಿ ನೂರಾರು ಜನ ಜಮಾಯಿಸಿದ್ದರು. ಒಂದು ಗುಂಪು ಕಾರ್ಖಾನೆಯ ಒಳಗೆ, ಮತ್ತೊಂದು ಹೊರಗೆ ನಿಂತು ಪ್ರತಿಭಟನೆ ನಡೆಸುತ್ತಿದ್ದವು. ಹೋರಾಟಗಾರರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಆದರೆ, ಎರಡು ಗುಂಪುಗಳ ನಡುವೆ ಅವಾಚ್ಯ ಶಬ್ದಗಳೊಂದಿಗೆ ಬೈದುಕೊಳ್ಳುವಿಕೆ ಆರಂಭವಾಯಿತು. ಏಕಾಏಕಿ ಕಲ್ಲು ತೂರಾಟ ಶುರುವಾಗಿ, ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ ಒಳಗೆ ನುಗ್ಗಲು ಯತ್ನಿಸಿದರು.
ರೈತರು ತಮ್ಮ ಮೇಲೆ ಆರೋಪ ಹೊರಿಸುವುದನ್ನು ತೀವ್ರವಾಗಿ ತಿರಸ್ಕರಿಸಿ, ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು ನಾವಲ್ಲ. ಬಾಕಿ ಬಿಲ್ ಕೇಳಲು ಇಲ್ಲಿಗೆ ಬಂದಿದ್ದೆವು. ನಮ್ಮನ್ನು ಕಾರ್ಖಾನೆ ಒಳಗೆ ಬಿಡಲೇ ಇಲ್ಲ ಎಂದು ರೈತರು ಹೇಳಿದ್ದಾರೆ. ಪೊಲೀಸರು ರೈತರನ್ನು ತಡೆದಿದ್ದರು. ಕಾರ್ಖಾನೆಯವರು ತಮ್ಮ ಜನರನ್ನೇ ಕರೆಸಿದ್ದರು ಎಂದು ಆರೋಪಿಸಲಾಗಿದೆ. ಎಸ್‌ಪಿ ಅವರ ಎದುರೇ ಆ ಕಡೆಯಿಂದ ಕಲ್ಲು ಎಸೆಯಲಾಯಿತು. ನಮ್ಮ ಜನ ಸೇರಿ ಪೊಲೀಸರಿಗೂ ಪೆಟ್ಟು ಬಿದ್ದಿದೆ. ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು ಯಾರು ಎಂಬುದು ಗೊತ್ತಿಲ್ಲ ಎಂದು ರೈತ ಮುಖಂಡ ಸುಭಾಷ್ ಶಿರಬೂರ್ ಹೇಳಿದ್ದಾರೆ.
ಘಟನೆಯಲ್ಲಿ ಎಎಸ್‌ಪಿ ಮಹಾಂತೇಶ್ ಜಿದ್ದಿ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಘಟನೆಯ ಹಿನ್ನೆಲೆ ಜಿಲ್ಲಾಡಳಿತ ಮೂರು ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಜಮಖಂಡಿ, ರಬಕವಿ ಬನಹಟ್ಟಿ ಮತ್ತು ಮುಧೋಳ ತಾಲ್ಲೂಕುಗಳಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.
ಸಚಿವ ತಿಮ್ಮಾಪುರ್ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಶಾಂತಿ ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಇಂದು ಸಚಿವ ತಿಮ್ಮಾಪುರ್ ಭೇಟಿ ನೀಡಲಿದ್ದಾರೆ. ಅವರೊಂದಿಗೆ ಡಿಸಿ ಸಂಗಪ್ಪ, ಎಸ್‌ಪಿ ಸಿದ್ಧಾರ್ಥ್ ಗೋಯಲ್ ಮತ್ತು ಸಿಇಒ ಶಶಿಧರ ಕುರೇರ ಅವರೂ ಸಹ ಭೇಟಿ ನೀಡಲಿದ್ದಾರೆ.





