ಬೆಂಗಳೂರು: ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಭಯಾನಕ ರೋಡ್ ರೇಜ್ ಘಟನೆ ಇಡೀ ನಗರವನ್ನೇ ಬೆಚ್ಚಿಬಿಟ್ಟಿದೆ. ಕಾರಿನ ಸೈಡ್ ಮಿರರ್‌ಗೆ ಬೈಕ್ ಟಚ್ ಆಗಿದ್ದಕ್ಕೆ ಕೋಪಗೊಂಡ ದಂಪತಿ ಜೋಡಿ, ಬೈಕ್ ಸವಾರನನ್ನು ಎರಡು ಕಿಲೋಮೀಟರ್ ದೂರ ಚೇಸ್ ಮಾಡಿ, ಕಾರಿನಿಂದ ಗುದ್ದಿ ಹತ್ಯೆ ಮಾಡಿದ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ.
ದಂಪತಿಗಳಾದ ಮನೋಜ್ ಕುಮಾರ್ ಮತ್ತು ಆರತಿ ಶರ್ಮಾ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ದರ್ಶನ್ ಎಂಬ ಯುವಕ ಮೃತಪಟ್ಟಿದ್ದು, ಅವನ ಸ್ನೇಹಿತ ವರೂಣ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆಯಿಂದ ಕೊಲೆಯ ಸತ್ಯ ಬಯಲಾಗಿದೆ.
ಘಟನೆಯ ವಿವರ
ಈ ಘಟನೆ ಅಕ್ಟೋಬರ್ 22 ರಂದು ರಾತ್ರಿ 11:30ರ ಸುಮಾರಿಗೆ ಶ್ರೀರಾಮ ಲೇಔಟ್‌ನಲ್ಲಿ ನಡೆದಿದೆ. ದರ್ಶನ್ ಮತ್ತು ವರೂಣ್ ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಅವರ ಬೈಕ್, ಮನೋಜ್ ಮತ್ತು ಆರತಿ ಶರ್ಮಾ ದಂಪತಿಗಳ ಕಾರಿನ ಮಿರರ್‌ಗೆ ತಗುಲಿದೆ. ಇದರಿಂದ ಒಡೆದುಹೋಗಿದ್ದ ಮಿರರ್‌ಗೆ ಸಿಟ್ಟಾದ ದಂಪತಿಗಳು, ಯುವಕರನ್ನು ಎರಡು ಕಿಲೋಮೀಟರ್‌ಗೂ ಹೆಚ್ಚು ಚೇಸ್ ಮಾಡಿದ್ದಾರೆ. ಕೋಪದ ರಭಸಕ್ಕೆ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ಡಿಕ್ಕಿಯ ರಭಸಕ್ಕೆ ದರ್ಶನ್ ಮತ್ತು ವರೂಣ್ ರಸ್ತೆಗೆ ಹಾರಿ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ. ವರೂಣ್ ಗಾಯಗಳಿಂದ ಬಳಲುತ್ತಿದ್ದಾನೆ.
ಆರಂಭದಲ್ಲಿ ಈ ಘಟನೆಯನ್ನು ಜೆ.ಪಿ.ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇವಲ ಅಪಘಾತ ಎಂದು ದಾಖಲಿಸಲಾಗಿತ್ತು. ಆದರೆ, ಪುಟ್ಟೇನಹಳ್ಳಿ ಪೊಲೀಸರ ತನಿಖೆಯಿಂದ ಇದು ಉದ್ದೇಶಪೂರ್ವಕ ಕೊಲೆ ಎಂಬ ಸತ್ಯ ಬಯಲಾಯಿತು. ತನಿಖೆಯ ವೇಳೆ ಆರೋಪಿಗಳಾದ ಮನೋಜ್ ಮತ್ತು ಆರತಿ, ದರ್ಶನ್ ಮತ್ತು ವರೂಣ್ ಕಾರಿನ ಮಿರರ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದೇ ಕಾರಣಕ್ಕೆ ದಂಪತಿಗಳು ಯುವಕರನ್ನು ಚೇಸ್ ಮಾಡಿ, ಒಮ್ಮೆ ತಪ್ಪಿಸಿಕೊಂಡ ಬಳಿಕ ಯೂ-ಟರ್ನ್ ಮಾಡಿ ಮತ್ತೆ ಬಂದು ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಈ ಡಿಕ್ಕಿಯಿಂದ ದರ್ಶನ್‌ಗೆ ಗಂಭೀರ ಗಾಯಗಳಾಗಿ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಕೊಲೆಯಾದ ಬಳಿಕ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದರು. ಆದರೆ, ಕಾರಿನ ಕೆಲವು ಭಾಗಗಳು ರಸ್ತೆಯಲ್ಲಿ ಬಿದ್ದಿದ್ದವು. ಇದನ್ನು ತೆಗೆದುಕೊಳ್ಳಲು ದಂಪತಿಗಳು ಮುಖಕ್ಕೆ ಮಾಸ್ಕ್ ಧರಿಸಿ ಮರಳಿ ಸ್ಥಳಕ್ಕೆ ಬಂದಿದ್ದರು. ಆದರೆ, ಪೊಲೀಸರ ತನಿಖೆಯಿಂದ ಈ ಎಲ್ಲ ವಿವರಗಳು ಬಯಲಾಗಿದ್ದು, ಆರೋಪಿಗಳಾದ ಮನೋಜ್ ಕುಮಾರ್ ಮತ್ತು ಆರತಿ ಶರ್ಮಾರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿದೆ.





