ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಹಾಗೂ ದೈಹಿಕ ಶಿಕ್ಷಕನಾಗಿರುವ ಮ್ಯಾಥಿವ್ ಎಂಬ ವ್ಯಕ್ತಿಯ ಮೇಲೆ ಸಂತ್ರಸ್ತೆಯೊಬ್ಬಳು ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ತನ್ನನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು, ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇದಲ್ಲದೇ, ಇತರ ಹಲವಾರು ಮಹಿಳೆಯರು ಮತ್ತು ಯುವತಿಯರ ಜೊತೆಗಿನ ಖಾಸಗಿ ಕ್ಷಣಗಳನ್ನು ಸಹ ಸೆರೆಹಿಡಿದಿದ್ದಾನೆ ಎಂದು ದೂರಿದ್ದಾಳೆ. ಒಟ್ಟು 2500 ವಿಡಿಯೋಗಳು ಆತನ ಬಳಿಯಿವೆ ಎಂಬ ಆರೋಪವಿದೆ.
ಸಂತ್ರಸ್ತೆಯ ದೂರಿನ ಪ್ರಕಾರ, ಮ್ಯಾಥಿವ್ ತನ್ನ ಖಾಸಗಿ ಕ್ಷಣಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾನೆ. ಈ ಆರೋಪಗಳಿಗೆ ಪುಷ್ಟಿ ನೀಡುವಂತೆ ಕೆಲವು ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳು ಸಂತ್ರಸ್ತೆಯ ಬಳಿಯಿವೆ. ಈ ವಿಡಿಯೋಗಳಲ್ಲಿ ಇತರ ಯುವತಿಯರು ಮತ್ತು ಮಹಿಳೆಯರ ಜೊತೆಗಿನ ದೃಶ್ಯಗಳೂ ಇವೆ ಎಂದು ಹೇಳಲಾಗಿದೆ.
ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, ಒಂದು ಹೆಣ್ಣು ಮಗುವಿದೆ. ತನ್ನ ಪತಿಯಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿರುವ ಈ ಮಹಿಳೆ, ತನ್ನ ಮಗಳು ಓದುತ್ತಿದ್ದ ಖಾಸಗಿ ಶಾಲೆಯಲ್ಲಿ ಮ್ಯಾಥಿವ್‌ನ ಪರಿಚಯವಾಯಿತು. ಮ್ಯಾಥಿವ್ ಆ ಶಾಲೆಯಲ್ಲಿ ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ಪರಿಚಯ ಬೆಳೆದು, ಕೆಲವು ಕಾಲ ಜೊತೆಯಾಗಿ ವಾಸಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯಂತೆ, ಇಬ್ಬರು ಚರ್ಚ್‌ನ ಮುಂದೆ ಮದುವೆಯಾಗಿದ್ದಾರೆ. ಆದರೆ, ಈ ಸಂದರ್ಭದಲ್ಲಿ ದೈಹಿಕ ಸಂಪರ್ಕದ ಕ್ಷಣಗಳನ್ನು ಮ್ಯಾಥಿವ್ ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮದುವೆಯಾದ ನಂತರ, ಮ್ಯಾಥಿವ್‌ನ ನಿಜವಾದ ಸ್ವರೂಪ ತಿಳಿದುಬಂದಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ. “ನಾವು ಕೆಲ ವರ್ಷಗಳ ಕಾಲ ಜೊತೆಯಾಗಿದ್ದೆವು. ಆದರೆ, ಒಂದು ರಾತ್ರಿ ನಾನು ಮಲಗಿದ್ದಾಗ, ನನ್ನ ಮೊಬೈಲ್ ಸಮೇತ ಆತ ಓಡಿಹೋಗಿದ್ದಾನೆ. ಆ ಮೊಬೈಲ್‌ನಲ್ಲಿ ಈತನ ಕೃತ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಾಕ್ಷಿಗಳಿದ್ದವು,” ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಮಹಿಳಾ ಆಯೋಗದ ಮುಂದೆ ದೂರು
ಸಂತ್ರಸ್ತೆಯ ಆರೋಪಗಳು ಗಂಭೀರವಾಗಿದ್ದು, ಈಗಾಗಲೇ ಮಹಿಳಾ ಆಯೋಗದ ಮುಂದೆ ಈ ಪ್ರಕರಣ ತಲುಪಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.