ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ವಿವೇಕ ಸ್ಮಾರಕ’ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸ್ವಾಮಿ ವಿವೇಕಾನಂದರು ತಮ್ಮ ಪರಿವ್ರಾಜಕ ಜೀವನದ ಅವಧಿಯಲ್ಲಿ ಮೈಸೂರಿನಲ್ಲಿ ತಂಗಿದ್ದ ಐತಿಹಾಸಿಕ ನೆನಪನ್ನು ಶಾಶ್ವತಗೊಳಿಸುವ ಉದ್ದೇಶದಿಂದ ಈ ಮಹತ್ವಾಕಾಂಕ್ಷಿ ಯೋಜನೆ ರೂಪುಗೊಂಡಿದ್ದು, ಕಾರ್ಯಕ್ರಮದ ಹಿನ್ನೆಲೆ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಈ ಸ್ಮಾರಕವು ಕೇವಲ ಕಟ್ಟಡವಲ್ಲ, ಯುವಜನರಲ್ಲಿ ರಾಷ್ಟ್ರಭಕ್ತಿ, ಮೌಲ್ಯಾಧಾರಿತ ಜೀವನ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡುವ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ರಾಮಕೃಷ್ಣ ಆಶ್ರಮದ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಈ ಯೋಜನೆ ಶಿಕ್ಷಣ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಂಕೇತವಾಗಿದೆ.
1892ರ ಐತಿಹಾಸಿಕ ನೆನಪಿಗೆ ನಮನ
ಸ್ವಾಮಿ ವಿವೇಕಾನಂದರು 1892ರ ನವೆಂಬರ್‌ನಲ್ಲಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿದ್ದ ಹಳೆಯ ಅನಾಥಾಲಯ (ನಿರಂಜನ ಮಠ) ಆವರಣದಲ್ಲಿ ತಂಗಿದ್ದರು. ಆಗಿನ ಮೈಸೂರು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ ಹತ್ತನೇಯವರು ಸ್ವಾಮೀಜಿಯವರನ್ನು ಆತ್ಮೀಯವಾಗಿ ಸ್ವಾಗತಿಸಿ, ಬಳಿಕ ಅಮೆರಿಕದ ಶಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಅಗತ್ಯ ನೆರವು ನೀಡಿದ್ದರು. ಈ ಐತಿಹಾಸಿಕ ಸಂಬಂಧವನ್ನು ಸ್ಮರಿಸುವ ಉದ್ದೇಶದಿಂದ ಇದೇ ಸ್ಥಳದಲ್ಲಿ ಭವ್ಯವಾದ ‘ವಿವೇಕ ಸ್ಮಾರಕ’ ನಿರ್ಮಿಸಲಾಗಿದೆ.
ಹೊಸದಾಗಿ ನಿರ್ಮಾಣಗೊಂಡಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರದಲ್ಲಿ ಮೌಲ್ಯಾಧಾರಿತ ಶಿಕ್ಷಣ, ವ್ಯಕ್ತಿತ್ವ ವಿಕಸನ, ಕೌಶಲ್ಯಾಭಿವೃದ್ಧಿ, ಯೋಗ, ಸಂಸ್ಕೃತಿ ಹಾಗೂ ರಾಷ್ಟ್ರಸೇವೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ನಡೆಸುವ ಯೋಜನೆ ರೂಪಿಸಲಾಗಿದೆ.
ಪ್ರಧಾನಿ ಮೋದಿ ಪ್ರವಾಸದ ಸಂಪೂರ್ಣ ವೇಳಾಪಟ್ಟಿ
ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನಕ್ಕೆ ತೆರಳಲಿದ್ದಾರೆ.
ನಂತರ ರಸ್ತೆ ಮಾರ್ಗವಾಗಿ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕಕ್ಕೆ ಭೇಟಿ ನೀಡಿ, ಸ್ಮಾರಕವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಸ್ಮಾರಕದ ವಿವಿಧ ವಿಭಾಗಗಳನ್ನು ವೀಕ್ಷಿಸಿದ ಬಳಿಕ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯ ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ಜನರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿ ಭಾಷಣದಲ್ಲಿ ಯುವಜನತೆ, ರಾಷ್ಟ್ರ ನಿರ್ಮಾಣ ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳ ಕುರಿತು ವಿಶೇಷ ಪ್ರಸ್ತಾಪ ಮಾಡುವ ನಿರೀಕ್ಷೆಯಿದೆ.
ಅರುಣ್ ಯೋಗಿರಾಜ್ ಕೆತ್ತಿದ ವಿಶೇಷ ಕಾಣಿಕೆ
ಈ ಕಾರ್ಯಕ್ರಮದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕಲಾಕೃತಿತನ್ನು ನೀಡಲಾಗುತ್ತದೆ. ಅಯೋಧ್ಯೆಯ ಬಾಲರಾಮನ ಮೂರ್ತಿಯನ್ನು ಕೆತ್ತಿ ದೇಶದ ಗಮನ ಸೆಳೆದಿರುವ ಅವರು, ಇದೀಗ ಸ್ವಾಮಿ ವಿವೇಕಾನಂದರ ಏಕಶಿಲಾ ಬಿಳಿ ಮಾರ್ಬಲ್ ಮೂರ್ತಿಯನ್ನು ನಿರ್ಮಿಸಿದ್ದಾರೆ.
ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ಪಾಷಾಣ ಸ್ಮಾರಕದ ಮಾದರಿಯಲ್ಲಿ ರೂಪುಗೊಂಡಿರುವ ಈ ಸುಂದರ ಶಿಲ್ಪವನ್ನು ರಾಮಕೃಷ್ಣ ಆಶ್ರಮದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ನೆನಪಿನ ಕಾಣಿಕೆಯಾಗಿ ನೀಡಲಾಗುತ್ತದೆ. ಇದು ಮೈಸೂರಿನ ಶಿಲ್ಪಕಲೆಯ ವೈಭವವನ್ನು ಮತ್ತೊಮ್ಮೆ ದೇಶದ ಮುಂದೆ ಅನಾವರಣಗೊಳಿಸಲಿದೆ.
ಬಿಗಿ ಭದ್ರತೆ-ಸಂಚಾರದಲ್ಲಿ ಬದಲಾವಣೆ
ಪ್ರಧಾನಿ ಭೇಟಿಯ ಹಿನ್ನೆಲೆ ವಿಶೇಷ ಭದ್ರತಾ ಪಡೆ (SPG) ಹಾಗೂ ಕರ್ನಾಟಕ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಬಹುಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಧಾನಿ ಸಂಚರಿಸುವ ಓವಲ್ ಮೈದಾನ, ಜೆಎಲ್‌ಬಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನಗರದ ಹಲವು ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ ಜಾರಿಗೊಂಡಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗುವಂತೆ ಮೈಸೂರು ಮಹಾನಗರ ಪಾಲಿಕೆ ರಸ್ತೆ ಡಾಂಬರೀಕರಣ, ರಸ್ತೆ ವಿಭಜಕಗಳ ಅಲಂಕಾರ, ವಿದ್ಯುತ್ ದೀಪಾಲಂಕಾರ ಹಾಗೂ ಸ್ವಚ್ಛತಾ ಕಾರ್ಯಗಳನ್ನು ಪೂರ್ಣಗೊಳಿಸಿದೆ.





