ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ ಪ್ರಧಾನಿ ಮೋದಿ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೈಸೂರಿಗೆ ಆಗಮಿಸಿದ್ದು, ಲಲಿತಮಹಲ್ ಹೆಲಿಪ್ಯಾಡ್‌ಗೆ ಬಂದಿಳಿದರು. ಬಳಿಕ ಹೆಲಿಪ್ಯಾಡ್‌ನಿಂದ ತಾವರೆಕಟ್ಟೆವರೆಗೂ ರೋಡ್ ಶೋ ನಡೆಸಿದರು. ಸಂಗೊಳ್ಳಿರಾಯಣ್ಣ ವೃತ್ತದಿಂದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಾರಾಲಯದವರೆಗೆ ರೋಡ್ ಶೋ ನಡೆದಿದ್ದು, ಮಾರ್ಗದುದ್ದಕ್ಕೂ ಜನಸಾಗರ ಕಂಡುಬಂದಿತು.

ನೂತನ ತಾರಾಲಯ ಉದ್ಘಾಟನೆ
ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಾರಾಲಯವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಪ್ರಧಾನಿ ಮೋದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಕಾರ್ಯಕ್ರಮದಲ್ಲಿ 8 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಬಿಗಿ ಪೊಲೀಸ್ ಭದ್ರತೆ
ಪ್ರಧಾನಿ ಆಗಮನಕ್ಕಾಗಿ ಮೈಸೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಹೆಲಿಪ್ಯಾಡ್‌ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸೆಕ್ಯುರಿಟಿ ಹೆಚ್ಚಿಸಲಾಗಿದೆ. ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಭದ್ರತೆಗಾಗಿ 2,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮೋದಿ ಸಂಚರಿಸುವ ಮಾರ್ಗದುದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ತಾರಾಲಯದ ಸುತ್ತ ಬಿಗಿ ಬಂದೋಬಸ್ತ್
ಮೈಸೂರಿನ ತಾರಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ VIP ಮಕ್ಕಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರ ಪಾಸ್ ಪರಿಶೀಲಿಸಿ ಒಳಗೆ ಬಿಡುತ್ತಿದ್ದು, ಯಾವುದೇ ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗದಂತೆ ಸೂಚನೆ ನೀಡಲಾಗಿದೆ.

ತಾರಾಲಯದ ವಿಶೇಷತೆ ಏನು?
ಇದು ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ತಾರಾಲಯವಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿದೆ. 15 ಡಿಗ್ರಿ ಓರೆಯಾದ ಎಲ್‌ಇಡಿ ಡೋಮ್ ಪ್ಲಾನೆಟೋರಿಯಂ ಆಗಿದ್ದು, ಮೈಸೂರು ವಿವಿಯಿಂದ 3.5 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. 115 ಕೋಟಿ ರೂಪಾಯಿ ವೆಚ್ಚದ ಹೈಟೆಕ್ ತಾರಾಲಯವಾಗಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಅವರ MPLADS ನಿಧಿ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳ ಸಹಯೋಗದಿಂದ ನಿರ್ಮಾಣವಾಗಿದೆ.

15 ಮೀಟರ್‌ನ ಗುಮ್ಮಟವನ್ನು LED ಪ್ಯಾನೆಲ್‌ಗಳಿಂದ ನಿರ್ಮಿಸಲಾಗಿದೆ. ಸಾಮಾನ್ಯ ಪ್ರೊಜೆಕ್ಟರ್ ತಂತ್ರಜ್ಞಾನಕ್ಕೆ ಬದಲಾಗಿ LED ಡೋಮ್ ಬಳಸಲಾಗಿದೆ. 15 ಡಿಗ್ರಿ ಓರೆಯಾದ ವಿನ್ಯಾಸದಿಂದ ನೈಜ ವೀಕ್ಷಣೆಯ ಅನುಭವ ಸಿಗಲಿದೆ. 8K ರೆಸಲ್ಯೂಶನ್‌ನಲ್ಲಿ ಗ್ರಹ-ತಾರೆಗಳ ಅದ್ಭುತ ದೃಶ್ಯಾವಳಿ ಪ್ರದರ್ಶನವಾಗಲಿದೆ. ಫ್ರಾನ್ಸ್‌ನ RSA Cosmos ಮತ್ತು ಜಪಾನ್‌ನ Konica Minolta ಕನ್ಸೋರ್ಟಿಯಂ ಅಭಿವೃದ್ಧಿಪಡಿಸಿದ SkyExplorer ಸಾಫ್ಟ್‌ವೇರ್ ಬಳಸಲಾಗಿದೆ. ಏಕಕಾಲದಲ್ಲಿ 150 ಜನರಿಗೆ ಕುಳಿತು ವೀಕ್ಷಿಸುವ ಅವಕಾಶವಿದೆ.

ವಿದ್ಯಾರ್ಥಿಗಳಿಗೆ ಸಂಶೋಧನಾ ಅವಕಾಶ
ವಿದ್ಯಾರ್ಥಿಗಳು ಮತ್ತು ಯುವ ವಿಜ್ಞಾನಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಅತ್ಯಾಧುನಿಕ ಟೆಲಿಸ್ಕೋಪ್‌ಗಳ ಡಾಟಾ ವಿಶ್ಲೇಷಣೆಗೆ ಟ್ರೈನಿಂಗ್ ನೀಡಲಾಗುತ್ತದೆ. ಇದರಿಂದ ಭವಿಷ್ಯದ ಖಗೋಳ ವಿಜ್ಞಾನಿಗಳಿಗೆ ಅಮೂಲ್ಯ ಅವಕಾಶ ಒದಗಲಿದೆ.

Exit mobile version