ಮೈಸೂರಿನಲ್ಲಿ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

Untitled Design 2026 11 13T160421.879

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ನೂತನ ತಾರಾಲಯವನ್ನು ಉದ್ಘಾಟಿಸಿದ್ದಾರೆ. ಭರ್ಜರಿ ರೋಡ್‌ಶೋ ಬಳಿಕ ಉದ್ಘಾಟನೆ ನೆರವೇರಿಸಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಾರಾಲಯವನ್ನು ಲೋಕಾರ್ಪಣೆ ಮಾಡಲಾಯಿತು. ಹೆಲಿಪ್ಯಾಡ್‌ನಿಂದ ತಾರಾಲಯದವರೆಗೆ ರೋಡ್‌ಶೋ ನಡೆಸಿ ಉದ್ಘಾಟನೆ ನೆರವೇರಿಸಿದರು.

ಭರ್ಜರಿ ರೋಡ್‌ಶೋ
ಪ್ರಧಾನಿ ಮೋದಿ ಅವರು ಲಲಿತಮಹಲ್ ಹೆಲಿಪ್ಯಾಡ್‌ಗೆ ಬಂದಿಳಿದ ಬಳಿಕ ಹೆಲಿಪ್ಯಾಡ್‌ನಿಂದ ತಾರಾಲಯದವರೆಗೆ ರೋಡ್‌ಶೋ ನಡೆಸಿದರು. ಸಂಗೊಳ್ಳಿರಾಯಣ್ಣ ವೃತ್ತದಿಂದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಾರಾಲಯದವರೆಗೆ ರೋಡ್‌ಶೋ ನಡೆದಿದ್ದು, ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದ ಜನರತ್ತ ಮೋದಿ ಕೈಬೀಸಿದರು. ಜನಸಾಗರದ ಉತ್ಸಾಹ ಕಣ್ಣಿಗೆ ಕಟ್ಟುವಂತಿತ್ತು. ಮೈಸೂರಿನ ಜನರು ಪ್ರಧಾನಿ ಮೋದಿ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಿದರು.

ತಾರಾಲಯ ಉದ್ಘಾಟನೆ
ರೋಡ್‌ಶೋ ಬಳಿಕ ಪ್ರಧಾನಿ ಮೋದಿ ಅವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಾರಾಲಯವನ್ನು ಉದ್ಘಾಟಿಸಿದರು. ಈ ಮೂಲಕ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ಸಾರ್ವಜನಿಕರಿಗೆ ಮುಕ್ತವಾಯಿತು. ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾದರು.

ಗಣ್ಯರ ಸಮ್ಮುಖ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಿ ಕಾರ್ಯಕ್ರಮದಲ್ಲಿ 8 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾರಾಲಯದ ವಿಶೇಷತೆ
ಇದು ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ತಾರಾಲಯವಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿದೆ. 15 ಡಿಗ್ರಿ ಓರೆಯಾದ ಎಲ್‌ಇಡಿ ಡೋಮ್ ಪ್ಲಾನೆಟೋರಿಯಂ ಆಗಿದ್ದು, ಮೈಸೂರು ವಿವಿಯಿಂದ 3.5 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. 115 ಕೋಟಿ ರೂಪಾಯಿ ವೆಚ್ಚದ ಹೈಟೆಕ್ ತಾರಾಲಯವಾಗಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಅವರ MPLADS ನಿಧಿ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳ ಸಹಯೋಗದಿಂದ ನಿರ್ಮಾಣವಾಗಿದೆ.

ತಾಂತ್ರಿಕ ಮಹತ್ವ
15 ಮೀಟರ್‌ನ ಗುಮ್ಮಟವನ್ನು LED ಪ್ಯಾನೆಲ್‌ಗಳಿಂದ ನಿರ್ಮಿಸಲಾಗಿದೆ. ಸಾಮಾನ್ಯ ಪ್ರೊಜೆಕ್ಟರ್ ತಂತ್ರಜ್ಞಾನಕ್ಕೆ ಬದಲಾಗಿ LED ಡೋಮ್ ಬಳಸಲಾಗಿದೆ. 15 ಡಿಗ್ರಿ ಓರೆಯಾದ ವಿನ್ಯಾಸದಿಂದ ನೈಜ ವೀಕ್ಷಣೆಯ ಅನುಭವ ಸಿಗಲಿದೆ. 8K ರೆಸಲ್ಯೂಶನ್‌ನಲ್ಲಿ ಗ್ರಹ-ತಾರೆಗಳ ಅದ್ಭುತ ದೃಶ್ಯಾವಳಿ ಪ್ರದರ್ಶನವಾಗಲಿದೆ. ಫ್ರಾನ್ಸ್‌ನ RSA Cosmos ಮತ್ತು ಜಪಾನ್‌ನ Konica Minolta ಕನ್ಸೋರ್ಟಿಯಂ ಅಭಿವೃದ್ಧಿಪಡಿಸಿದ SkyExplorer ಸಾಫ್ಟ್‌ವೇರ್ ಬಳಸಲಾಗಿದೆ. ಏಕಕಾಲದಲ್ಲಿ 150 ಜನರಿಗೆ ಕುಳಿತು ವೀಕ್ಷಿಸುವ ಅವಕಾಶವಿದೆ.

ವಿದ್ಯಾರ್ಥಿಗಳಿಗೆ ಸಂಶೋಧನಾ ಅವಕಾಶ
ವಿದ್ಯಾರ್ಥಿಗಳು ಮತ್ತು ಯುವ ವಿಜ್ಞಾನಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಅತ್ಯಾಧುನಿಕ ಟೆಲಿಸ್ಕೋಪ್‌ಗಳ ಡಾಟಾ ವಿಶ್ಲೇಷಣೆಗೆ ಟ್ರೈನಿಂಗ್ ನೀಡಲಾಗುತ್ತದೆ. ಇದರಿಂದ ಭವಿಷ್ಯದ ಖಗೋಳ ವಿಜ್ಞಾನಿಗಳಿಗೆ ಅಮೂಲ್ಯ ಅವಕಾಶ ಒದಗಲಿದೆ.

ಬಿಗಿ ಪೊಲೀಸ್ ಭದ್ರತೆ
ಪ್ರಧಾನಿ ಆಗಮನಕ್ಕಾಗಿ ಮೈಸೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಹೆಲಿಪ್ಯಾಡ್‌ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸೆಕ್ಯುರಿಟಿ ಹೆಚ್ಚಿಸಲಾಗಿತ್ತು. ಭದ್ರತೆಗಾಗಿ 2,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಮೋದಿ ಸಂಚರಿಸುವ ಮಾರ್ಗದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿತ್ತು. ತಾರಾಲಯದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Exit mobile version