ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ: ಪ್ರಧಾನಿ ಮೋದಿ

ಬೆಂಗಳೂರಿನ ಅಣ್ಣಮ್ಮದೇವಿಗೆ ನಮಿಸಿದ ಪ್ರಧಾನಿ ಮೋದಿ

ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ ಪ್ರಧಾನಿ ಮೋದಿ

ಬೆಂಗಳೂರು: ಕರ್ನಾಟಕದಲ್ಲಿ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ಸೇರಿದಂತೆ 60ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಅಮೃತ್ ಭಾರತ್ ನಿಲ್ದಾಣಗಳಾಗಿ ರೂಪುಗೊಳ್ಳಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ
ಪ್ರಧಾನಿ ಮೋದಿ ಅವರು ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೊದಲ ಹಂತದ ಎತ್ತರಿಸಿದ ಮಾರ್ಗಕ್ಕೆ ಚಾಲನೆ ನೀಡಿದರು. ಸುಮಾರು 3,470 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಮಾರ್ಗವನ್ನು ತಾವರೆಕೆರೆ (ಎಸ್‌ಜಿ ಪಾಳ್ಯ) ಮೆಟ್ರೋ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಲಾಯಿತು. ಈ ಮೂಲಕ ಬೆಂಗಳೂರಿನ ಸಂಚಾರ ವ್ಯವಸ್ಥೆಗೆ ಹೊಸ ಚೈತನ್ಯ ಸಿಕ್ಕಿದೆ.

ಕನ್ನಡದಲ್ಲೇ ಭಾಷಣ, ಅಣ್ಣಮ್ಮ ದೇವಿಗೆ ನಮೋ ಪ್ರಣಾಮ
ಬೆಂಗಳೂರಿನಲ್ಲಿ 15,600 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕನ್ನಡದಲ್ಲೇ ಭಾಷಣ ಆರಂಭಿಸಿದರು. ‘ಬೆಂಗಳೂರಿನ ನನ್ನ ಸೋದರ, ಸೋದರಿಯರಿಗೆ ನನ್ನ ನಮಸ್ಕಾರಗಳು’ ಎನ್ನತ್ತಾ, ಮೊದಲಿಗೆ ಬೆಂಗಳೂರಿನ ಅಧಿದೇವತೆ ಅಣ್ಣಮ್ಮ ತಾಯಿ, ನಾಡಪ್ರಭು ಕೆಂಪೇಗೌಡರಿಗೆ ಶ್ರದ್ಧಾಪೂರ್ವಕ ನಮನ ಸಲ್ಲಿಸಿದರು.

100 ಕಿ.ಮೀ ಮೆಟ್ರೋ ದಾಖಲೆ
ಈ ದಿನವು ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿಯ ಪಯಣಕ್ಕೆ ಹೊಸ ವೇಗ ನೀಡಲಿದೆ ಎಂದ ಮೋದಿ, ದೆಹಲಿ ಎನ್‌ಸಿಆರ್ ಮತ್ತು ಮುಂಬೈ ಮಹಾನಗರದ ನಂತರ ಮೆಟ್ರೋ ಜಾಲವು 100 ಕಿ.ಮೀ ತಲುಪಿದ ದೇಶದ 3ನೇ ನಗರ ಬೆಂಗಳೂರಾಗಿದೆ ಎಂದು ಶ್ಲಾಘಿಸಿದರು. ಈ ಹೊಸ ಮೆಟ್ರೋ ಮಾರ್ಗವು ಐಐಎಂ ಬೆಂಗಳೂರು ಮತ್ತು ಇತರ ಸಂಸ್ಥೆಗಳಿಗೆ ಸಂಪರ್ಕವನ್ನು ಸುಧಾರಿಸಲಿದೆ. ಅನೇಕ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳೂ ಸಂಪರ್ಕಗೊಳ್ಳಲಿವೆ ಎಂದರು.

ಸಿಎಂ ಡಿ.ಕೆ. ಶಿವಕುಮಾರ್‌ಗೆ ಮೋದಿ ಟಾಂಗ್
ನಗುನಗುತ್ತಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಧಾನಿ ಮೋದಿ ಟಾಂಗ್ ನೀಡಿದರು. ಬೆಂಗಳೂರಿನಲ್ಲಿ ಆರಂಭದಲ್ಲಿ 17 ಕಿ.ಮೀ ಮಾತ್ರ ಮೆಟ್ರೋ ಮಾರ್ಗ ಇತ್ತು. ಇದೀಗ 100 ಕಿ.ಮೀ ಮೆಟ್ರೋ ದಾಖಲೆ ಬರೆದಿದೆ. ಇದು ನಿಮ್ಮ ಸಹಕಾರದಿಂದಲೇ ದಾಖಲೆ ಬರೆದಿರುವುದು ಎಂದು ಶಿವಕುಮಾರ್ ಎಂಬ ಹೆಸರು ಕರೆದು ಒತ್ತಿ ಹೇಳಿದರು. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಸಿಎಂಗೆ ತಿಳಿಸಿದರು.

ಅನಂತ್ ಕುಮಾರ್ ಮತ್ತು ಸುಧಾಯಾದವ್ ಸ್ಮರಣೆ
ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಮೋದಿ ಸ್ಮರಿಸಿದರು. ಮೆಟ್ರೋ ವಿಸ್ತರಣೆ ನೋಡಿ ಅನಂತ್ ಕುಮಾರ್ ಅವರ ಆತ್ಮಕ್ಕೆ ಸಂತಸ ಉಂಟಾಗಿದೆ ಎಂದು ಭಾವುಕರಾದರು. ರಾಜ್ಯಪಾಲೆ ಸುಧಾಯಾದವ್ ಅವರ ಕುಟುಂಬದ ತ್ಯಾಗದ ಗುಣಗಾನ ಮಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ಅವರ ಪತಿ ಹುತಾತ್ಮರಾಗಿದ್ದನ್ನು ಸ್ಮರಿಸಿದರು.

ಅಮೃತ್ ಭಾರತ್ ಮತ್ತು ವಂದೇ ಭಾರತ್
ಭಾರತೀಯ ರೈಲ್ವೆಯು ಗತಕಾಲದ ಹಳೆಯ ಮನಸ್ಥಿತಿಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದೆ ಎಂದ ಮೋದಿ, ವಂದೇ ಭಾರತ್ ರೈಲುಗಳು ಮತ್ತು ಅಮೃತ್ ಭಾರತ್ ನಿಲ್ದಾಣಗಳು ‘ವಿಕಸಿತ ಭಾರತ’ದ ರೈಲು ಸೇವೆಗಳ ನೋಟವನ್ನು ಪ್ರತಿನಿಧಿಸುತ್ತವೆ ಎಂದರು. ಕರ್ನಾಟಕದಲ್ಲಿ 60ಕ್ಕೂ ಹೆಚ್ಚು ನಿಲ್ದಾಣಗಳು ಅಮೃತ್ ಭಾರತ್ ನಿಲ್ದಾಣಗಳಾಗಿ ರೂಪುಗೊಳ್ಳಲಿವೆ. ಇವತ್ತು ಕರ್ನಾಟಕಕ್ಕೆ ಗೋವಾಕ್ಕೆ ಹೋಗುವ ವಂದೇ ಭಾರತ್ ಸಿಕ್ಕಿದೆ ಎಂದು ಹೇಳಿದರು.

ಇಂದು ಚಾಲನೆ ನೀಡಲಾದ ಯೋಜನೆಗಳು ‘ವಿಕಸಿತ ಕರ್ನಾಟಕ’ಕ್ಕೆ ವೇಗ ನೀಡಲಿದ್ದು, ಇದು ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿವೆ ಎಂದು ಮೋದಿ ಬಣ್ಣಿಸಿದರು. ಮೆಟ್ರೋ ಮತ್ತು ರೈಲ್ವೆಗೆ ಸಂಬಂಧಿಸಿದ ಉಪಕ್ರಮಗಳಿಂದ ಹಿಡಿದು ಇಂಧನ ಭದ್ರತೆಯವರೆಗೆ, ಈ ಎಲ್ಲಾ ಯೋಜನೆಗಳು ಕರ್ನಾಟಕದ ಮೂಲಸೌಕರ್ಯಕ್ಕೆ ಹೊಸ ಶಕ್ತಿ ತುಂಬಲಿವೆ ಎಂದರು.

Exit mobile version