ಕಾರವಾರ, ಮೇ 20: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಜಲಸಾಹಸ ಕ್ರೀಡೆಗಳಿಗೆ ವಿಧಿಸಲಾಗಿದ್ದ ನಿಷೇಧವನ್ನು ಜಿಲ್ಲಾಡಳಿತ ಕೇವಲ 24 ಗಂಟೆಗಳಲ್ಲೇ ಹಿಂಪಡೆದಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆ ಮುಂಗಾರು ಮುಗಿಯುವವರೆಗೆ ಅರಬ್ಬೀ ಸಮುದ್ರ, ಅಘನಾಶಿನಿ ನದಿ ಹಾಗೂ ಶರಾವತಿ ಹಿನ್ನೀರಿನಲ್ಲಿ ನಡೆಯುತ್ತಿದ್ದ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಪ್ರವಾಸೋದ್ಯಮ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಇದೀಗ ಆ ನಿರ್ಧಾರವನ್ನು ವಾಪಸ್ ಪಡೆಯಲಾಗಿದ್ದು, ಗೋಕರ್ಣ, ಮುರುಡೇಶ್ವರ, ಕಾರವಾರ, ಹೊನ್ನಾವರ ಹಾಗೂ ದಾಂಡೇಲಿ ಭಾಗಗಳಲ್ಲಿ ಜಲಸಾಹಸ ಕ್ರೀಡೆಗಳು ಮತ್ತೆ ಆರಂಭವಾಗಿವೆ.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಡೆಯುವ ಜೆಟ್ ಸ್ಕೀ, ಬೋಟಿಂಗ್, ಕಾಯಾಕಿಂಗ್, ಬನಾನಾ ರೈಡ್ ಸೇರಿದಂತೆ ಹಲವು ಜಲಸಾಹಸ ಚಟುವಟಿಕೆಗಳು ದೇಶ-ವಿದೇಶಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹೀಗಾಗಿ ದಿಢೀರ್ ನಿಷೇಧದಿಂದ ಪ್ರವಾಸೋದ್ಯಮ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೇಸಿಗೆ ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದ ಸಮಯದಲ್ಲೇ ಈ ಆದೇಶ ಹೊರಬಿದ್ದಿದ್ದರಿಂದ ಸ್ಥಳೀಯ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದರು.
ಪ್ರವಾಸೋದ್ಯಮ ಇಲಾಖೆಯು ಹವಾಮಾನ ಇಲಾಖೆ ನೀಡಿದ್ದ ಮುನ್ನೆಚ್ಚರಿಕೆ ಆಧರಿಸಿ ಸುರಕ್ಷತಾ ದೃಷ್ಟಿಯಿಂದ ಜಲಸಾಹಸ ಕ್ರೀಡೆಗಳನ್ನು ಸ್ಥಗಿತಗೊಳಿಸಿತ್ತು. ಆದರೆ ಈ ನಿರ್ಧಾರ ಕೈಗೊಳ್ಳುವ ಮೊದಲು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿರಲಿಲ್ಲ ಎಂಬ ಮಾಹಿತಿ ಹೊರಬಂದಿದೆ. ಆಡಳಿತಾತ್ಮಕ ಸಮನ್ವಯದ ಕೊರತೆ ಹಿನ್ನೆಲೆ ಈ ಆದೇಶ ವಿವಾದಕ್ಕೆ ಕಾರಣವಾಗಿತ್ತು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯ ಮರುಪರಿಶೀಲನೆ ನಡೆಸಲು ಸೂಚಿಸಿದರು. ಬಳಿಕ ಪ್ರವಾಸೋದ್ಯಮ ಇಲಾಖೆ ಹೊರಡಿಸಿದ್ದ ನಿಷೇಧ ಆದೇಶವನ್ನು ಹಿಂಪಡೆಯಲಾಗಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಜಲಸಾಹಸ ಕ್ರೀಡೆಗಳನ್ನು ಮುಂದುವರಿಸಲು ಅನುಮತಿ ನೀಡಲಾಗಿದೆ.
ನಿಷೇಧ ತೆರವುಗೊಂಡಿರುವ ಸುದ್ದಿ ಹೊರಬಿದ್ದ ತಕ್ಷಣ ಪ್ರವಾಸಿಗರು ಹಾಗೂ ಪ್ರವಾಸೋದ್ಯಮ ವಲಯದವರು ಸಂತಸ ವ್ಯಕ್ತಪಡಿಸಿದ್ದಾರೆ. ಜಲಸಾಹಸ ಕ್ರೀಡೆಗಳನ್ನೇ ನಂಬಿಕೊಂಡಿದ್ದ ಸ್ಥಳೀಯ ಬೋಟಿಂಗ್ ನಿರ್ವಹಣಾಕಾರರು, ಹೋಂ ಸ್ಟೇ ಮಾಲೀಕರು, ರೆಸಾರ್ಟ್ ಉದ್ಯಮಿಗಳು ಮತ್ತು ಪ್ರವಾಸ ಮಾರ್ಗದರ್ಶಕರು ಜಿಲ್ಲಾಡಳಿತದ ಕ್ರಮವನ್ನು ಸ್ವಾಗತಿಸಿದ್ದಾರೆ.
ಗೋಕರ್ಣ ಮತ್ತು ಮುರುಡೇಶ್ವರ ಭಾಗಗಳಲ್ಲಿ ಈಗಾಗಲೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ವಾಟರ್ ಸ್ಪೋರ್ಟ್ಸ್ ಪುನರಾರಂಭದಿಂದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಆದರೆ ಜಿಲ್ಲಾಡಳಿತ ಪ್ರವಾಸಿಗರಿಗೆ ಮುನ್ನೆಚ್ಚರಿಕೆಯ ಸೂಚನೆಗಳನ್ನೂ ನೀಡಿದೆ. ಹವಾಮಾನ ಪರಿಸ್ಥಿತಿ ಹದಗೆಟ್ಟರೆ ಅಥವಾ ಸಮುದ್ರ ಅಲೆಗಳ ಅಬ್ಬರ ಹೆಚ್ಚಾದರೆ ತಾತ್ಕಾಲಿಕವಾಗಿ ಚಟುವಟಿಕೆಗಳನ್ನು ನಿಲ್ಲಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.
