ರಾಜ್ಯದ ಎಲ್ಲಾ ಪಂಚಾಯ್ತಿಗಳಿಗೆ ‘ಮಹಾತ್ಮ ಗಾಂಧಿ’ ಹೆಸರು: ಆಗಸ್ಟ್ 15 ಗಡುವು!

Untitled design 2026 07 14T161646.137

ಬೆಂಗಳೂರು, ಜುಲೈ (14):  ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯದ ಎಲ್ಲಾ 5,927 ಗ್ರಾಮ ಪಂಚಾಯಿತಿಗಳಿಗೆ “ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ” ಎಂದು ಮರುನಾಮಕರಣ ಮಾಡಲು ಮುಂಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಗಡುವನ್ನು ವಿಧಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಇಲಾಖೆಯ ಆಯುಕ್ತಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಿಡಿಓ (PDO), ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು. 2026-27ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯ ಭಾಷಣದ (ಬಜೆಟ್) ಕಂಡಿಕೆ 279ರಲ್ಲಿ ಘೋಷಿಸಿರುವ ಭರವಸೆಯಂತೆ, ನಿಗದಿತ ಸಮಯದೊಳಗೆ ಎಲ್ಲಾ ಗ್ರಾಮ ಪಂಚಾಯಿತಿಗಳ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ಮತ್ತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಗ್ರಾಮ ಸ್ವರಾಜ್ಯದ ಪ್ರತಿಪಾದಕರಾಗಿದ್ದ ಗಾಂಧೀಜಿಯವರ ಗೌರವಾರ್ಥವಾಗಿ ದೇಶದ ಹೆಮ್ಮೆಯ ಯೋಜನೆಗೆ “ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ” (MGNREGA) ಎಂದು ಹೆಸರಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಇತ್ತೀಚೆಗೆ ಅಂದರೆ ಜುಲೈ 1ರಿಂದ ಜಾರಿಗೆ ತಂದಿರುವ ಹೊಸ ಪರಿಷ್ಕೃತ ಗ್ರಾಮೀಣ ಯೋಜನೆಯಾದ ‘ವಿಬಿ- ಜಿ ರಾಮ್ ಜಿ’ (VB-G RAM G) ಯಲ್ಲಿ ಮಹಾತ್ಮಾ ಗಾಂಧೀಜಿಯವರ ಹೆಸರನ್ನೇ ಸಂಪೂರ್ಣವಾಗಿ ಕೈಬಿಟ್ಟಿದೆ. ಕೇಂದ್ರ ಸರ್ಕಾರದ ಈ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಗಾಂಧೀಜಿಯವರ ಹೆಸರನ್ನು ಉಳಿಸಲು ರಾಜ್ಯದ ಎಲ್ಲಾ ಪಂಚಾಯಿತಿಗಳಿಗೆ ಅವರದ್ದೇ ಹೆಸರಿಡಲು ದೃಢ ತೀರ್ಮಾನ ಕೈಗೊಂಡಿದೆ.

ಕಳೆದ ತಿಂಗಳು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ದೇಶದ ಎಲ್ಲಾ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಉನ್ನತ ಮಟ್ಟದ ಸಮಾವೇಶದಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಭಾರತದಲ್ಲಿರುವ ಒಟ್ಟು 2.68 ಕೋಟಿ ಗ್ರಾಮ ಪಂಚಾಯಿತಿಗಳಿಗೂ ಮಹಾತ್ಮಾ ಗಾಂಧೀಜಿಯವರ ಹೆಸರನ್ನೇ ನಾಮಕರಣ ಮಾಡಬೇಕು ಎಂದು ಅವರು ರಾಷ್ಟ್ರ ಮಟ್ಟದಲ್ಲಿ ಆಗ್ರಹಿಸಿದ್ದರು. ಇದರೊಂದಿಗೆ, ಕೇಂದ್ರದ ಹೊಸ ‘ವಿಬಿ- ಜಿ ರಾಮ್ ಜಿ’ ಯೋಜನೆಯ ಹೆಸರಿನ ಮುಂಭಾಗದಲ್ಲೂ ಗಾಂಧೀಜಿಯವರ ಹೆಸರನ್ನು ಸೇರ್ಪಡೆಗೊಳಿಸಿ, ಅದನ್ನು “ಮಹಾತ್ಮಾ ಗಾಂಧಿ ವಿಬಿ -ಜಿ ರಾಮ್ ಜಿ” ಎಂದು ಮರುನಾಮಕರಣ ಮಾಡಬೇಕೆಂದು ಬಲವಾಗಿ ಒತ್ತಾಯಿಸಿರುವುದಾಗಿ ಸಚಿವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Exit mobile version