ಬೆಂಗಳೂರು, ಜುಲೈ (14): ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರೇರಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು. ಇದರ ಜೊತೆಗೆ, ಸ್ಟಾರ್ಟ್‌ಅಪ್‌ಗಳು, ಕಂಪನಿಗಳು ಹಾಗೂ ಇತರ ಸಂಸ್ಥೆಗಳ ಎಐ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರವು ‘ಎಐ ಹಬ್’ ಒಂದನ್ನು ಸ್ಥಾಪಿಸಲಿದ್ದು, ಇದು ಅತ್ಯಾಧುನಿಕ ಇನ್‌ಕ್ಯುಬೇಷನ್ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಬೆಂಗಳೂರಿನ ಬಿಐಇಸಿ (BIEC) ಯಲ್ಲಿ ನಡೆದ ಗೂಗಲ್ ಐ/ಒ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತಾವಿತ ಎಐ ವಿಶ್ವವಿದ್ಯಾಲಯವು ವಿಶ್ವಮಟ್ಟದ ಎಐ ಪ್ರತಿಭೆಗಳನ್ನು ಬೆಳೆಸುವುದು, ಸಂಶೋಧನೆಯನ್ನು ಉತ್ತೇಜಿಸುವುದು ಹಾಗೂ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ಮತ್ತು ಸರ್ಕಾರದ ನಡುವಿನ ಸಹಕಾರವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು. ಕೃತಕ ಬುದ್ಧಿಮತ್ತೆಯು ಆವಿಯ ಯಂತ್ರ, ವಿದ್ಯುತ್, ಇಂಟರ್‌ನೆಟ್ ಹಾಗೂ ಮೊಬೈಲ್ ತಂತ್ರಜ್ಞಾನಗಳಷ್ಟೇ ಶಕ್ತಿಶಾಲಿಯಾದ ಇಂದಿನ ತಲೆಮಾರಿನ ನಿರ್ಣಾಯಕ ತಾಂತ್ರಿಕ ಕ್ರಾಂತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದು ಕರ್ನಾಟಕವು ಭಾರತದ ಒಟ್ಟು ಸಾಫ್ಟ್‌ವೇರ್ ರಫ್ತಿಗೆ ಶೇಕಡಾ 40 ರಷ್ಟು ಕೊಡುಗೆ ನೀಡುತ್ತಿದೆ. ದೇಶದ ಸ್ಟಾರ್ಟ್‌ಅಪ್ ರಾಜಧಾನಿಯಾಗಿರುವ ಬೆಂಗಳೂರು 17,000 ಕ್ಕೂ ಹೆಚ್ಚು ನವೋದ್ಯಮಗಳಿಗೆ ಆಸರೆಯಾಗಿದೆ. ಈ ತಾಂತ್ರಿಕ ಪಯಣದಲ್ಲಿ ಗೂಗಲ್ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಅತ್ಯುತ್ತಮ ಪಾಲುದಾರನಾಗಿದೆ. ಪ್ರಸ್ತುತ ಭಾರತದಲ್ಲಿರುವ ಗೂಗಲ್‌ನ 18 ಸಾವಿರ ಸಿಬ್ಬಂದಿ ಪೈಕಿ 12 ಸಾವಿರದಷ್ಟು ಸಿಬ್ಬಂದಿ ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿರುವುದು ನಮ್ಮ ನಗರದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೆಮ್ಮೆಯಿಂದ ನುಡಿದರು.
ಗೂಗಲ್ ಜೊತೆಗಿನ ಈ ಬಾಂಧವ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದ್ದು, ಮುಂಬರುವ ದಿನಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಜಂಟಿ ಪರಿಹಾರಗಳನ್ನು ಹುಡುಕಲಾಗುವುದು ಎಂದು ಭರವಸೆ ನೀಡಿದರು. “ಜತೆಯಾಗುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು” ಎಂಬ ತತ್ವದೊಂದಿಗೆ ಕರ್ನಾಟಕದ ಹಾಗೂ ದೇಶದ ಪ್ರಗತಿಗೆ ಶ್ರಮಿಸಲು ತಂತ್ರಜ್ಞಾನ ನಾಯಕರಿಗೆ ಕರೆ ನೀಡಿದರು.