ರಾಮಚಂದ್ರಗೌಡರ ನಿಧನಕ್ಕೆ ಸಿಎಂ ಡಿಕೆಶಿ ಕಂಬನಿ!

ಬೆಂಗಳೂರು, ಜುಲೈ (14): ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರಗೌಡರು ನಿಷ್ಠುರವಾಗಿ ನೀತಿ ಮತ್ತು ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿದ್ದ ನಿಷ್ಠ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೊಂಡಾಡಿದ್ದಾರೆ. ಸಂಘ ಪರಿವಾರದ ಕಟ್ಟಾಳು ಹಾಗೂ ಬಿಜೆಪಿಯ ಹಿರಿಯ ಮಾರ್ಗದರ್ಶಕರಾಗಿದ್ದ ರಾಮಚಂದ್ರಗೌಡರ ನಿಧನದ ನಂತರ  ಸುದ್ದಿಗಾರರೊಂದಿಗೆ ಮಾತನಾಡಿ ಅವರು ತೀವ್ರ ಕಂಬನಿ ಮಿಡಿದರು.

ರಾಮಚಂದ್ರಗೌಡರ ರಾಜಕೀಯ ಪಯಣ ಹಾಗೂ ಸರಳತೆಯನ್ನು ಸ್ಮರಿಸಿದ ಡಿ.ಕೆ. ಶಿವಕುಮಾರ್, “ಅವರು ಆರಂಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಅದ್ಭುತ ಕೆಲಸ ಮಾಡಿದ್ದರು. ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಗೌರವ ಕೊಟ್ಟು, ಅವರ ಜೊತೆ ಬೆರೆತು, ಸಮಸ್ಯೆಗಳನ್ನು ಅತ್ಯಂತ ಹತ್ತಿರದಿಂದ ಅರಿತು ಸೇವೆ ಮಾಡುತ್ತಿದ್ದರು. ಬೆಂಗಳೂರಿನ ಇಂಚಿಂಚು ಸಮಸ್ಯೆಗಳ ಅರಿವು ಅವರಿಗಿತ್ತು. ವಿಧಾನ ಪರಿಷತ್‌ನಲ್ಲಿ ತಮ್ಮ ಬುದ್ಧಿವಂತಿಕೆಯಿಂದ ಸದಾ ಜನಪರ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಅವರು, ಪಕ್ಷಾತೀತವಾಗಿ ಅಪಾರ ಮಿತ್ರಬಳಗವನ್ನು ಹೊಂದಿದ್ದರು.

ಯಡಿಯೂರಪ್ಪನವರಿಗೆ ಆಪ್ತರಾಗಿದ್ದ ನಾಯಕ

ಬೆಂಗಳೂರಿನಲ್ಲಿ ಅತ್ಯಂತ ದೊಡ್ಡ ಕುಟುಂಬ ಹಿನ್ನೆಲೆ ಹೊಂದಿದ್ದರೂ ರಾಮಚಂದ್ರಗೌಡರು ಕೊನೆಯವರೆಗೂ ಸರಳ ಬದುಕನ್ನು ನಡೆಸಿದರು. ಬಿಜೆಪಿ ಪಕ್ಷ ಅಥವಾ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಯಾವುದೇ ಪ್ರಮುಖ ರಾಜಕೀಯ ತೀರ್ಮಾನ ತೆಗೆದುಕೊಳ್ಳಬೇಕಾದರೂ ಮೊದಲು ರಾಮಚಂದ್ರಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ ಎಂದು ಡಿಕೆಶಿ ಸ್ಮರಿಸಿದರು.

ಭಾವನಾತ್ಮಕ ಸಂಬಂಧ ಮತ್ತು ವಿಷಾದ

ರಾಮಚಂದ್ರಗೌಡರು ತಮಗೆ ಹತ್ತಿರದ ಸಂಬಂಧಿಕರಾಗಿದ್ದರು ಎಂಬ ಆಪ್ತ ಸಂಗತಿಯನ್ನು ಇದೇ ವೇಳೆ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್, “ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ‘ನನ್ನನ್ನು ವ್ಹೀಲ್‌ ಚೇರ್‌ನಲ್ಲಾದರೂ ಕರೆದುಕೊಂಡು ಹೋಗಿ’ ಎಂದು ಗೌಡರು ತಮ್ಮ ಸಂಬಂಧಿಕರ ಬಳಿ ಆಸೆ ವ್ಯಕ್ತಪಡಿಸಿದ್ದರು ಎಂದು ಕೇಳಿದ್ದೆ. ಎರಡು ದಿನಗಳ ಹಿಂದೆಯಷ್ಟೇ ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾತನಾಡಬೇಕು ಎಂಬ ತೀವ್ರ ಆಸೆ ನನ್ನದಾಗಿತ್ತು. ಆದರೆ ಕಾರ್ಯದೊತ್ತಡದಿಂದ ಅದು ಸಾಧ್ಯವಾಗಲಿಲ್ಲ. ಇಂದು ಸರ್ಕಾರಿ ಗೌರವ ಸಲ್ಲಿಸುವ ಇಂತಹ ದುಃಖದ ಸಂದರ್ಭದಲ್ಲಿ ಅವರ ಮುಂದೆ ನಿಲ್ಲಬೇಕಾಗಿ ಬಂದಿದೆ” ಎಂದು ತೀವ್ರ ವಿಷಾದ ವ್ಯಕ್ತಪಡಿಸಿದರು.

ಯಾರನ್ನೂ ಎಂದಿಗೂ ವೈಯಕ್ತಿಕವಾಗಿ ದ್ವೇಷಿಸದ ರಾಮಚಂದ್ರಗೌಡರು, ಸಮಾಜದ ಹಿತಕ್ಕೆ ಪೂರಕವಾದ ವಿಚಾರಗಳನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು. ವಿಧಾನ ಪರಿಷತ್ತಿನಲ್ಲಿ ಅವರು ನೀಡುತ್ತಿದ್ದ ಭಾಷಣಗಳು ಇಂದಿನ ಯುವ ಪೀಳಿಗೆಯ ರಾಜಕಾರಣಿಗಳಿಗೆ ಸದಾ ಮಾದರಿಯಾಗಿವೆ ಎಂದು ತಮ್ಮ ಸಂತಾಪ ನುಡಿಗಳಲ್ಲಿ ತಿಳಿಸಿದರು.

Exit mobile version