ಬೆಂಗಳೂರು, ಅಕ್ಟೋಬರ್ 12, 2025: ಬೆಂಗಳೂರು ವಲಯದ ಮಾದಕ ವಸ್ತು ನಿಯಂತ್ರಣ ಮಂಡಳಿ (NCB) ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭಾರೀ ಪ್ರಮಾಣದ ಮಾದಕ ವಸ್ತು ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸುಮಾರು ₹50 ಕೋಟಿ ಮೌಲ್ಯದ 45 ಕೆ.ಜಿ. ಹೈಡ್ರೋಗಾಂಜಾ ಮತ್ತು 6 ಕೆ.ಜಿ. ಸೈಲೋಸಿಬಿನ್ (Psilocybin) ಅಣಬೆಯನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಇದು ಮಾದಕ ವಸ್ತು ದಂಧೆಯ ವಿರುದ್ಧ ಎನ್‌ಸಿಬಿಯ ದೊಡ್ಡ ಯಶಸ್ಸಿನ ಕಾರ್ಯಾಚರಣೆಯಾಗಿದೆ.
ಕಾರ್ಯಾಚರಣೆಯ ವಿವರ
ಥೈಲ್ಯಾಂಡ್‌ನಿಂದ ಮಾದಕ ವಸ್ತುಗಳ ಸಾಗಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್‌ಸಿಬಿ, ಕೊಲಂಬೋದಿಂದ ಆಗಮಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೊದಲಿಗೆ ವಶಕ್ಕೆ ಪಡೆಯಿತು. ಈ ಇಬ್ಬರಿಂದ 31 ಕೆ.ಜಿ. ಹೈಡ್ರೋಗಾಂಜಾ ಮತ್ತು 4 ಕೆ.ಜಿ. ಸೈಲೋಸಿಬಿನ್ ಅಣಬೆಯನ್ನು ಜಪ್ತಿ ಮಾಡಲಾಯಿತು. ಇವರನ್ನು ವಿಚಾರಣೆಗೆ ಒಳಪಡಿಸಿದಾಗ, ಶ್ರೀಲಂಕಾದಿಂದ ಬರುವ ಮಾದಕ ವಸ್ತುಗಳ ಮುಖ್ಯ ಹ್ಯಾಂಡ್ಲರ್‌ನ ಬಗ್ಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿಯ ಆಧಾರದ ಮೇಲೆ ಕಾರ್ಯತಂತ್ರ ರೂಪಿಸಿದ ಎನ್‌ಸಿಬಿ, ಮುಂದಿನ ವಿಮಾನದಲ್ಲಿ ಆಗಮಿಸಿದ ಶ್ರೀಲಂಕಾದ ಮುಖ್ಯ ಹ್ಯಾಂಡ್ಲರ್‌ನನ್ನು ಬಂಧಿಸಿತ್ತು. ಈ ಆರೋಪಿಯಿಂದ 14 ಕೆ.ಜಿ. ಹೈಡ್ರೋಗಾಂಜಾ ಮತ್ತು 2 ಕೆ.ಜಿ. ಸೈಲೋಸಿಬಿನ್ ಅಣಬೆಯನ್ನು ವಶಪಡಿಸಿಕೊಳ್ಳಲಾಯಿತು.
ಆರೋಪಿಗಳು ತಮ್ಮ ಕೃತ್ಯವನ್ನು ಮರೆಮಾಚಲು ಅತ್ಯಂತ ಚಾಣಾಕ್ಷ ವಿಧಾನವನ್ನು ಅನುಸರಿಸಿದ್ದರು. ಸುಮಾರು 250 ಫುಡ್ ಟಿನ್‌ಗಳಲ್ಲಿ ಮಾದಕ ವಸ್ತುಗಳನ್ನು ಸೀಲ್ ಮಾಡಿ, ವಿಮಾನದ ಮೂಲಕ ಸಾಗಿಸುತ್ತಿದ್ದರು. ಈ ಟಿನ್‌ಗಳು ಸಾಮಾನ್ಯ ಆಹಾರ ಪದಾರ್ಥಗಳ ತರಹ ಕಾಣುವಂತೆ ತಯಾರಿಸಲಾಗಿತ್ತು. ಆದರೆ ಎನ್‌ಸಿಬಿಯ ತನಿಖೆಯಿಂದ ಈ ಜಾಲ ಬಯಲಿಗೆ ಬಂದಿದೆ.
ಈ ವರ್ಷದ ದಾಖಲೆ ಜಪ್ತಿ
ಈ ಕಾರ್ಯಾಚರಣೆಯೊಂದಿಗೆ, ಬೆಂಗಳೂರು ಎನ್‌ಸಿಬಿ ಘಟಕವು 2025ರಲ್ಲಿ ಒಟ್ಟು 18 ಪ್ರಕರಣಗಳಲ್ಲಿ ಸುಮಾರು ₹100 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಪ್ರಕರಣಗಳಲ್ಲಿ 45 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರು ಕೇರಳ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಾದ್ಯಂತ ಗಾಂಜಾ ದಂಧೆಯನ್ನು ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಆರೋಪಿಗಳು ಅಂತರರಾಷ್ಟ್ರೀಯ ಮಾದಕ ವಸ್ತು ಜಾಲದ ಭಾಗವಾಗಿದ್ದರು ಎಂಬ ಮಾಹಿತಿಯೂ ದೊರೆತಿದೆ.