ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗಿಯಾಗಲು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ನಿರಾಕರಿಸದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ , ಅದು ಅವರಿಗೆ ಬಿಟ್ಟಿದ್ದು. ಇನ್ಫೋಸಿಸ್ ಅವರು ಬೃಹಸ್ಪತಿಗಳಾ? ಇದು ಹಿಂದುಳಿದವರ ಸಮೀಕ್ಷೆ ಅಲ್ಲ. ಅವರಿಗೆ ತಪ್ಪು ಮಾಹಿತಿ ಇರಬಹುದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಇದು ಕೇವಲ ಹಿಂದುಳಿದ ವರ್ಗಗಳ ಸಮೀಕ್ಷೆ ಅಲ್ಲ, ಬದಲಾಗಿ ರಾಜ್ಯದ 7 ಕೋಟಿ ಜನತೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಮೇಲ್ಜಾತಿಯವರಿಗೆ ಹಿಂದುಳಿದ ವರ್ಗಗಳ ಸಮೀಕ್ಷೆ ಬೇಕಾಗಿಲ್ಲ. ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಅಂದ್ರೆ ಸಂವಿಧಾನ ವಿರೋಧಿಗಳು, ದೇಶ ದ್ರೋಹಿಗಳು ಅಂತಾನೇ ಹೇಳಬೇಕಾಗುತ್ತೆ ಎಂದು ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಅವರೆಲ್ಲಾ ತಂತ್ರಜ್ಞಾನ ದಿಗ್ಗಜರು ಅನಿಸಿಕೊಂಡವರು. ಸರ್ಕಾರದಿಂದ ಒಂದು ರೂಪಾಯಿಗೆ ಭೂಮಿ ಪಡೆದುಕೊಂಡಿರುತ್ತಾರೆ. ಸುಮಾರು 35 ಸಾವಿರ ಕೋಟಿ ತೆರಿಗೆ ಕಟ್ಟೋರು ಇದ್ದಾರೆ. ತೆರಿಗೆ ಕಟ್ಟೋದರಿಂದ ತಪ್ಪಿಸಿಕೊಳ್ಳಲು ಭಾಗಿಯಾಗುತ್ತಿಲ್ಲ, ಎಂದು ಟೀಕಿಸಿದರು.
ಈ ಸಮೀಕ್ಷೆಯು ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದರ ಮೂಲಕ ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಏಳ್ಗೆಗೆ ಸೂಕ್ತ ನೀತಿಗಳನ್ನು ರೂಪಿಸಲು ಉದ್ದೇಶಿಸಲಾಗಿದೆ. ಸರ್ಕಾರದ ಪ್ರಕಾರ, ಇದು ಒಂದು ಜನಗಣತಿ-ಶೈಲಿಯ ಸಮೀಕ್ಷೆಯಾಗಿದ್ದು, ಎಲ್ಲಾ ವರ್ಗಗಳ ಜನತೆಯನ್ನು ಒಳಗೊಳ್ಳುವ ಉದ್ದೇಶ ಹೊಂದಿದೆ.