ಬೆಂಗಳೂರು: ನಂದಿನಿ ಬ್ರಾಂಡ್‌ನ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಉಂಟಾಗುತ್ತದೆ ಎಂಬ ಆರೋಪಗಳು ಸಂಪೂರ್ಣ ಆಧಾರರಹಿತ ಮತ್ತು ಸುಳ್ಳು ಎಂದು Karnataka Milk Federation (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ಸುದ್ದಿಯಿಂದ ಗ್ರಾಹಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೆಲವು ದಿನಗಳ ಹಿಂದೆ ಡಾ. ಶರಣ್ಯ ಸಂತೋಷ್ ಎಂಬುವವರ ಹೇಳಿಕೆಯ ಒಂದು ವಿಡಿಯೋ ಹಾಗೂ ಪೋಸ್ಟ್‌ಗಳು ವೈರಲ್ ಆಗಿದ್ದವು. ಅದರಲ್ಲಿ ನಂದಿನಿ ಬ್ರಾಂಡ್‌ನ ಕೆಲವು ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಅಪಾಯವಿದೆ ಎಂದು ಆರೋಪಿಸಲಾಗಿತ್ತು. ಈ ಹೇಳಿಕೆಗಳು ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದಂತೆ, ಗ್ರಾಹಕರಲ್ಲಿ ಗೊಂದಲ ಮತ್ತು ಭೀತಿ ಉಂಟಾಯಿತು.
ಈ ಕುರಿತು ಸ್ಪಷ್ಟನೆ ನೀಡಿರುವ ಕೆಎಂಎಫ್ ಎಂಡಿ ಶಿವಸ್ವಾಮಿ, “ನಂದಿನಿ ಉತ್ಪನ್ನಗಳನ್ನು ಸಂಪೂರ್ಣ ನೈಸರ್ಗಿಕ ವಿಧಾನದಲ್ಲಿ ತಯಾರಿಸಲಾಗುತ್ತದೆ. ನಮ್ಮ ಯಾವುದೇ ಉತ್ಪನ್ನಗಳಲ್ಲಿ ಹಾನಿಕಾರಕ ಕೆಮಿಕಲ್‌ಗಳನ್ನು ಬಳಸುವುದಿಲ್ಲ. ಇದುವರೆಗೆ ನಮ್ಮ ಉತ್ಪನ್ನಗಳ ಬಗ್ಗೆ ಯಾವುದೇ ಗಂಭೀರ ದೂರು ದಾಖಲಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತವಾಗಿದೆ,” ಎಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಪರೀಕ್ಷೆಯಲ್ಲಿ ಸುರಕ್ಷಿತವೆಂದು ದೃಢೀಕರಣ
ಅಪಪ್ರಚಾರದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (Food Safety Department) ನಂದಿನಿ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಇಲಾಖೆಯ ವರದಿ ಪ್ರಕಾರ, ಕೆಎಂಎಫ್ ಉತ್ಪನ್ನಗಳು ಎಲ್ಲ ಮಾನದಂಡಗಳಿಗೆ ಅನುಗುಣವಾಗಿವೆ ಮತ್ತು ಸಂಪೂರ್ಣ ಸುರಕ್ಷಿತವಾಗಿವೆ ಎಂದು ತಿಳಿಸಿದೆ.
ಮೈಸೂರು ಪಾಕ್, ಮಿಲ್ಕ್ ಪೇಡಾ, ಪನ್ನೀರ್, ವೆನಿಲಾ ಮಿಲ್ಕ್ ಶೇಕ್ ಸೇರಿದಂತೆ ವಿವಿಧ ಉತ್ಪನ್ನಗಳ ಪರೀಕ್ಷೆಯಲ್ಲಿ ಯಾವುದೇ ಅಪಾಯಕಾರಿ ಅಂಶ ಪತ್ತೆಯಾಗಿಲ್ಲ. ಇದರಿಂದ ಗ್ರಾಹಕರು ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನು ಕ್ರಮ
ನಂದಿನಿ ಬ್ರಾಂಡ್‌ಗೆ ಮಾನಹಾನಿ ಉಂಟುಮಾಡುವ ರೀತಿಯಲ್ಲಿ ಆಧಾರರಹಿತ ಆರೋಪಗಳನ್ನು ಮಾಡಿರುವವರ ವಿರುದ್ಧ ಕೆಎಂಎಫ್ ಈಗಾಗಲೇ ಎಫ್‌ಐಆರ್ ದಾಖಲಿಸಿದೆ. ಈ ರೀತಿಯ ಸುಳ್ಳು ಪ್ರಚಾರಗಳಿಂದ ಬ್ರಾಂಡ್ ಗೌರವಕ್ಕೆ ಧಕ್ಕೆಯಾಗಿದ್ದು, ಕೋಟ್ಯಾಂತರ ಗ್ರಾಹಕರಲ್ಲಿ ಅನಗತ್ಯ ಭಯ ಸೃಷ್ಟಿಯಾಗಿದೆ ಎಂದು ಕೆಎಂಎಫ್ ಹೇಳಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (ಹಳೆಯ ಟ್ವಿಟರ್) ನಲ್ಲಿ ಕೆಎಂಎಫ್ ಅಧಿಕೃತ ಪ್ರಕಟಣೆ ಹೊರಡಿಸಿ, “ನಂದಿನಿ ಉತ್ಪನ್ನಗಳನ್ನು ಅಸುರಕ್ಷಿತವೆಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ. ನಮ್ಮ ಬ್ರಾಂಡ್‌ನೊಂದಿಗೆ ಬಾಲ್ಯದಿಂದಲೇ ಬೆಳೆದಿರುವ ಲಕ್ಷಾಂತರ ಕುಟುಂಬಗಳ ವಿಶ್ವಾಸವನ್ನು ಕುಂದಿಸಲು ದುರುದ್ದೇಶಪೂರಿತ ಪ್ರಯತ್ನ ನಡೆದಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ,” ಎಂದು ತಿಳಿಸಿದೆ.
ಗ್ರಾಹಕರಿಗೆ ಮನವಿ
ಕೆಎಂಎಫ್ ಅಧಿಕಾರಿಗಳು ಗ್ರಾಹಕರಿಗೆ ಯಾವುದೇ ಅಪಪ್ರಚಾರಕ್ಕೆ ಒಳಗಾಗದೇ, ಅಧಿಕೃತ ಮಾಹಿತಿಯನ್ನೇ ನಂಬುವಂತೆ ಮನವಿ ಮಾಡಿದ್ದಾರೆ. “ನಂದಿನಿ ಉತ್ಪನ್ನಗಳು ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ತಯಾರಿಸಲಾಗುತ್ತದೆ. ಗ್ರಾಹಕರು ಯಾವುದೇ ಆತಂಕವಿಲ್ಲದೆ ನಮ್ಮ ಉತ್ಪನ್ನಗಳನ್ನು ಬಳಸಿ,” ಎಂದು ಎಂಡಿ ಶಿವಸ್ವಾಮಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ನಂದಿನಿ ಬ್ರಾಂಡ್‌ಗೆ ಅಪಾರ ವಿಶ್ವಾಸವಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳ ಕ್ಷೇತ್ರದಲ್ಲಿ ಇದು ಪ್ರಮುಖ ಸ್ಥಾನವನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಆಧಾರರಹಿತ ಆರೋಪಗಳು ಹರಿದಾಡುತ್ತಿರುವುದು ವಿಷಾದನೀಯ ಎಂದು ಕೆಎಂಎಫ್ ಅಭಿಪ್ರಾಯಪಟ್ಟಿದೆ.





