ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದ (RV Road – Bommasandra) ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈಗಾಗಲೇ ಐದು ರೈಲುಗಳೊಂದಿಗೆ ನಡೆಸುತ್ತಿರುವ ಸೇವೆಗೆ ಡಿಸೆಂಬರ್ ಮೊದಲ ವಾರದೊಳಗೆ ಆರನೇ ರೈಲು ಸೇರ್ಪಡೆಯಾಗಲಿದೆ. ಈ ಹೊಸ ರೈಲು ಕೊಲ್ಕತ್ತಾದ ಟಿಟಾಗರ್ ಕಾರ್ಖಾನೆಯಿಂದ ಈಗಾಗಲೇ ಹೊರಟಿದ್ದು, ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಹೆಬ್ಬಗೋಡಿ ಡಿಪೋ ತಲುಪಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ಮಾರ್ಗದಲ್ಲಿ ಪೀಕ್ ಅವರ್‌ಗಳಲ್ಲಿ ಪ್ರತಿ 15 ನಿಮಿಷಗಳಿಗೊಮ್ಮೆ ಮತ್ತು ನಾನ್-ಪೀಕ್ ಸಮಯದಲ್ಲಿ 19 ನಿಮಿಷಗಳಿಗೊಮ್ಮೆ ರೈಲು ಸಂಚರಿಸುತ್ತಿದೆ. ಆದರೆ ಆರನೇ ರೈಲು ಸೇವೆ ಪ್ರಾರಂಭವಾದ ಬಳಿಕ ಪೀಕ್ ಅವರ್‌ಗಳಲ್ಲಿ 10 ನಿಮಿಷಗಳಿಗೊಮ್ಮೆ ಮತ್ತು ನಾನ್-ಪೀಕ್ ಸಮಯದಲ್ಲಿ 15 ನಿಮಿಷಗಳಿಗೊಮ್ಮೆ ರೈಲು ಲಭ್ಯವಾಗಲಿದೆ. ಇದರಿಂದ ಸಾವಿರಾರು ದಿನನಿತ್ಯದ ಪ್ರಯಾಣಿಕರ ಕಾಯುವ ಸಮಯ ಗಣನೀಯವಾಗಿ ಇಳಿಯಲಿದೆ.
ಹೊಸ ರೈಲು ಬಂದ ತಕ್ಷಣ ತಾಂತ್ರಿಕ ಪರೀಕ್ಷೆಗಳು ನಡೆಯಲಿವೆ. ರಾತ್ರಿ ವೇಳೆ ಸಿಗ್ನಲಿಂಗ್, ಬ್ರೇಕಿಂಗ್, ಸುರಕ್ಷತಾ ವ್ಯವಸ್ಥೆಗಳ ಪರೀಕ್ಷೆಗಳನ್ನು ಸಿಎಂಆರ್‌ಎಸ್ (ಕಮಿಷನರ್ ಫಾರ್ ರೈಲ್ವೇ ಸೇಫ್ಟಿ) ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳು ನಡೆಸಲಿದ್ದಾರೆ. ಎಲ್ಲಾ ಪರೀಕ್ಷೆಗಳು ಯಶಸ್ವಿಯಾದ ಬಳಿಕ ಈ ರೈಲು ಪ್ರಯಾಣಿಕ ಸೇವೆಗೆ ಲಗ್ಗೆ ಇಡಲಿದೆ.
ಇದು ಕೇವಲ ಆರಂಭ ಮಾತ್ರ! ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದಲ್ಲಿ ಇನ್ನೂ ಎರಡು ಹೊಸ ರೈಲುಗಳು (ಒಟ್ಟು 7 ಮತ್ತು 8ನೇ ರೈಲು) ಟಿಟಾಗರ್‌ನಿಂದ ಬೆಂಗಳೂರಿಗೆ ಆಗಮಿಸಲಿವೆ. ಈ ಮೂರು ಹೊಸ ರೈಲುಗಳು ಸಂಪೂರ್ಣ ಕಾರ್ಯಾಚರಣೆಗೆ ಬಂದ ಬಳಿಕ ಹಳದಿ ಮಾರ್ಗದಲ್ಲಿ ಪೀಕ್ ಅವರ್‌ಗಳಲ್ಲಿ ಪ್ರತಿ 5 ನಿಮಿಷಗಳಿಗೊಮ್ಮೆ ರೈಲು ಸಂಚಾರ ಸಾಧ್ಯವಾಗಲಿದೆ.
ಹಳದಿ ಮಾರ್ಗವು 19.15 ಕಿ.ಮೀ. ಉದ್ದ ಹೊಂದಿದ್ದು, ಈಗಾಗಲೇ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಜಯದೇವ ಆಸ್ಪತ್ರೆ, ದಕ್ಷಿಣ ಬೆಂಗಳೂರಿನ ಪ್ರಮುಖ ತಾಂತ್ರಿಕ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಈ ಮಾರ್ಗದಲ್ಲಿ ದಿನನಿತ್ಯ ಸರಾಸರಿ 60,000ಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ರೈಲುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಆಗುವ ನಿರೀಕ್ಷೆಯಿದೆ.
ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, “ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ಆವರ್ತನವನ್ನು ಕ್ರಮೇಣ ಹೆಚ್ಚಿಸುತ್ತಿದ್ದೇವೆ. ಮುಂದಿನ ಒಂದೆರಡು ತಿಂಗಳಲ್ಲಿ ಹಳದಿ ಮಾರ್ಗವು ಬೆಂಗಳೂರಿನ ಅತ್ಯಂತ ವೇಗದ ಮತ್ತು ಅತ್ಯಂತ ಆರಾಮದಾಯಕ ಮೆಟ್ರೋ ಮಾರ್ಗಗಳಲ್ಲಿ ಒಂದಾಗಿ ಪರಿವರ್ತನೆಯಾಗಲಿದೆ” ಎಂದಿದ್ದಾರೆ.





