ಮೈಸೂರಿನ ದಸರಾ ಮಹೋತ್ಸವವು ರಾಜ್ಯದಾದ್ಯಂತ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಈ ಬಾರಿಯ ಆಯುಧ ಪೂಜೆಯು ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ನಡೆಯುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾದ ಚಂಡಿ ಹೋಮದೊಂದಿಗೆ ಪೂಜಾ ಕಾರ್ಯಕ್ರಮಗಳು ಶುರುವಾದವು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದಾರೆ.
ಅರಮನೆಯಲ್ಲಿ ಆಯುಧ ಪೂಜೆಯ ವೈಭವ
ಮೈಸೂರು ಅರಮನೆಯ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 12:06ಕ್ಕೆ ಯದುವೀರ್ ಒಡೆಯರ್ ಮತ್ತು ಅವರ ಪತ್ನಿ ತ್ರಿಷಿಕಾ ಕುಮಾರಿ ದೇವಿ ಅವರು ಆಯುಧ ಪೂಜೆಯನ್ನು ಪ್ರಾರಂಭಿಸಲಿದ್ದಾರೆ. ಪಟ್ಟದ ಆನೆ, ಕುದುರೆ, ಹಸುವಿನ ಆಗಮನದೊಂದಿಗೆ ಪೂಜಾ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯನ್ನು ಪಡೆದವು. ಐಷಾರಾಮಿ ಕಾರುಗಳು, ರಥ, ನಂದಿಧ್ವಜ ಸ್ಥಂಬ, ಶಸ್ತ್ರಾಸ್ತ್ರಗಳು ಮತ್ತು ಫಿರಂಗಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಸೋಮೇಶ್ವರ ದೇವಾಲಯಕ್ಕೆ ಪಟ್ಟದ ಕತ್ತಿಯೊಂದಿಗೆ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ಸಂಜೆಯ ವೇಳೆಗೆ ರತ್ನ ಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ.
ಗಿನ್ನಿಸ್ ದಾಖಲೆಗೆ ಸೇರಿದ ಡೋನ್ ಪ್ರದರ್ಶನ
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬನ್ನಿಮಂಟಪದ ಬಾನಂಗಳದಲ್ಲಿ ನಡೆದ ಡೋನ್ ಪ್ರದರ್ಶನವು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಯಿತು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಆಯೋಜಿತವಾದ ಈ ಕಾರ್ಯಕ್ರಮದಲ್ಲಿ 3000 ಡೋನ್‌ಗಳು ಆಗಸದಲ್ಲಿ ವಿವಿಧ ಕಲಾಕೃತಿಗಳನ್ನು ರಚಿಸಿದವು. ಸೌರಮಂಡಲ, ವಿಶ್ವ ಭೂಪಟ, ರಾಷ್ಟ್ರೀಯ ಪ್ರಾಣಿ ಹುಲಿ, ಶ್ರೀಕೃಷ್ಣನ ನೃತ್ಯ, ಕಾವೇರಿ ಮಾತೆ, ಕರ್ನಾಟಕ ಭೂಪಟ, ಮತ್ತು ಚಾಮುಂಡೇಶ್ವರಿಯ ಚಿತ್ರಣಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.
ಈ ಡೋನ್‌ಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ, ಆಕರ್ಷಕ ಚಿತ್ತಾರವನ್ನು ಬಿಡಿಸಿದವು. ಕರ್ನಾಟಕದ ನಾಡದೇವತೆ ಚಾಮುಂಡೇಶ್ವರಿಯ ಕಲಾಕೃತಿಯೊಂದಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರಗಳನ್ನು ಒಳಗೊಂಡ ಕರ್ನಾಟಕ ಭೂಪಟವು ವಿಶೇಷ ಗಮನ ಸೆಳೆಯಿತು.