ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಕರು ಮಾರಕಾಸ್ತ್ರ ಹಿಡಿದು ಹೊಡೆದಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕ್ಯಾತನಹಳ್ಳಿyಲ್ಲಿ ನಡೆದಿದೆ.
ಈ ಘಟನೆಯಲ್ಲಿ ಮಾರಕಾಸ್ತ್ರಗಳನ್ನು ಬಳಸಿ ಯೋಗಮಣಿ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಗಲಾಟೆಯ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಘಟನೆಯ ಹಿನ್ನೆಲೆ
ಯೋಗಮಣಿ ಎಂಬ ಮಹಿಳೆಯ ಪತಿ ರಾಜೇಶ್ ಅವರಿಗೆ ಸೇರಿದ 2.5 ಎಕರೆ ಜಮೀನಿಗಾಗಿ ಗಲಾಟೆ ನಡೆದಿದೆ. ಈ ಜಮೀನು ಯೋಗಮಣಿಯವರ ಪತಿ ರಾಜೇಶ್ ಅವರ ಹೆಸರಿನಲ್ಲಿತ್ತು. ಆದರೆ, 11 ದಿನಗಳ ಹಿಂದೆ ರಾಜೇಶ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ರಾಜೇಶ್ ಅವರ ಮರಣದ ನಂತರ, ಈ ಜಮೀನಿನ ಮೇಲೆ ಹಕ್ಕು ಸಾಧಿಸಲು ರಾಜೇಶ್ ಅವರ ಸಂಬಂಧಿಕರಾದ ಮಹದೇವಮ್ಮ, ಸೋಮ ಮತ್ತು ಸೌಮ್ಯ ಗಲಾಟೆ ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಗಲಾಟೆಯು ರಸ್ತೆಯ ಮಧ್ಯದಲ್ಲಿ ತೀವ್ರಗೊಂಡು, ಮಾರಕಾಸ್ತ್ರಗಳೊಂದಿಗೆ ಹೊಡೆದಾಡಿಕೊಂಡಿದ್ದಾರೆ.
ಯೋಗಮಣಿಯವರ ಕೈ ಮುರಿತವಾಗಿದ್ದು, ಅವರ ಮಗ ಚಂದು ಹಾಗೂ ಸಂಬಂಧಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಜೇಶ್ ಅವರ ಅಜ್ಜಿ ನಿಂಗಮ್ಮ, ಯೋಗಮಣಿ, ಚಂದು ಮತ್ತು ಕೋಮಲ ವಿರುದ್ಧ ಗಲಾಟೆ ಮಾಡಿದ್ದಾರೆ ಎಂದು ಕೇಳಿಬಂದಿದೆ.
ಎಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸ್ಥಳೀಯ ಪೊಲೀಸರು ಗಲಾಟೆಯಲ್ಲಿ ಭಾಗಿಯಾದ ಎಲ್ಲರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಬಳಸಿದ ಆರೋಪದ ಮೇಲೆ ತನಿಖೆ ಚುರುಕುಗೊಳಿಸಲಾಗಿದೆ.