ಮೈಸೂರು, ಡಿ.26: ಮೈಸೂರು ಅರಮನೆ ಸಮೀಪ ಸಂಭವಿಸಿದ ಭೀಕರ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿ ಲಕ್ಷ್ಮಿ ಅವರು ಶುಕ್ರವಾರ ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ನಂಜನಗೂಡು ಮೂಲದ ಹೂವಿನ ವ್ಯಾಪಾರಿ ಮಂಜುಳಾ ಅವರು ಮಧ್ಯಾಹ್ನ ಕೊನೆಯುಸಿರೆಳೆದಿದ್ದರು. ಗುರುವಾರ ರಾತ್ರಿ ಸ್ಥಳದಲ್ಲೇ ಬಲೂನ್ ವ್ಯಾಪಾರಿ ಸಲೀಂ ಖಮರುದ್ದೀನ್ ಮೃತಪಟ್ಟಿದ್ದರು.
ಗುರುವಾರ ರಾತ್ರಿ ಮೈಸೂರು ಅರಮನೆ ಎದುರು ಪ್ರವಾಸಿಗರಿದ್ದ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಬಲೂನ್‌ಗಳಿಗೆ ಗಾಳಿ ತುಂಬಿಸುವ ವೇಳೆ ಹೀಲಿಯಂ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಕೆಲಕಾಲ ಅಲ್ಲಿನ ಸುತ್ತಮುತ್ತಲು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಉತ್ತರ ಪ್ರದೇಶದ ಕನೌಜ್ ಮೂಲದ ಬಲೂನ್ ವ್ಯಾಪಾರಿ ಸಲೀಂ ಖಮರುದ್ದೀನ್ (40) ಎಂಬಾತ ಸೈಕಲ್ ಮೇಲೆ ಹೀಲಿಯಂ ಸಿಲಿಂಡರ್ ಇಟ್ಟುಕೊಂಡು ಬಲೂನ್‌ಗಳಿಗೆ ಗಾಳಿ ತುಂಬಿಸುತ್ತಿದ್ದ. ಇದೇ ವೇಳೆ ಸಿಲಿಂಡರ್ ಸ್ಫೋಟಗೊಂಡು ಸಲೀಂ ಸ್ಥಳದಲ್ಲೇ ಮೃತಪಟ್ಟರು. ಸ್ಫೋಟದ ಪರಿಣಾಮವಾಗಿ ಹೂವಿನ ವ್ಯಾಪಾರಿ ಮಂಜುಳಾ, ಬೆಂಗಳೂರಿನ ಲಕ್ಷ್ಮಿ, ಕೋಲ್ಕತಾದ ಶಮಿನಾ ಶಬಿಲ್, ರಾಣೆಬೆನ್ನೂರಿನ ಕೊಟ್ರೇಶ್ ಬೀರಪ್ಪ ಮತ್ತು ರಂಜಿತಾ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳುಗಳನ್ನು ತಕ್ಷಣವೇ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಜುಳಾ ಅವರಿಗೆ ತಲೆಗೆ ಗಂಭೀರವಾದ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟರು. ಇದೀಗ ಲಕ್ಷ್ಮಿ ಅವರು ಕೂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನುಳಿದ ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ವೈದ್ಯರು ನಿಗಾ ವಹಿಸಿ ಪರಿಶೀಲಿಸುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸ್ಫೋಟದಲ್ಲಿ ಗಾಯಗೊಂಡ ರಾಣೆಬೆನ್ನೂರು ಮೂಲದ ಕೊಟ್ರೇಶ್ ಬೀರಪ್ಪ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬದೊಂದಿಗೆ ಮೈಸೂರು ಪ್ರವಾಸಕ್ಕೆ ಬಂದಿದ್ದ ಕೊಟ್ರೇಶ್ ತಮ್ಮ ಮಕ್ಕಳಿಗೆ ಬಲೂನ್ ಕೊಡಿಸಲು ಬಂದ ವೇಳೆ ಈ ದುರಂತ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.





