ಈ ಬಾರಿಯ ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಕಂಬಳ ಕಾರ್ಯಕ್ರಮವನ್ನು ವಿಶೇಷ ಆಕರ್ಷಣೆಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದ್ದಾರೆ.
ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಂಬಳ ಆಯೋಜನೆ ಸಿದ್ಧತಾ ಸಭೆಯ ಬಳಿಕ ಮಾತನಾಡಿದ ಅವರು, ಕಳೆದ ವರ್ಷವೇ ಕಂಬಳ ಆಯೋಜಿಸುವ ಯೋಜನೆ ಇತ್ತಾದರೂ ಸೂಕ್ತ ಸ್ಥಳ ಲಭ್ಯವಾಗದ ಕಾರಣ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಮುಂಚಿತವಾಗಿ ಯೋಜನೆ ರೂಪಿಸಲಾಗಿದ್ದು, ಮೈಸೂರು ನಗರದಲ್ಲಿ ವಿಜಯನಗರ ಮೊದಲ ಹಂತ, ವಿಜಯನಗರ ನಾಲ್ಕನೇ ಹಂತ ಹಾಗೂ ಸಾತಗಳ್ಳಿ ರಿಂಗ್ ರೋಡ್ ಪ್ರದೇಶಗಳಲ್ಲಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಒಂದು ಸ್ಥಳವನ್ನು ಅಂತಿಮವಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಕಂಬಳ ಆಯೋಜನೆಗೆ ಕನಿಷ್ಠ ಏಳು ಎಕರೆ ಸ್ಥಳ ಅಗತ್ಯವಿದ್ದು, ಸ್ಥಳ ಆಯ್ಕೆ ವೇಳೆ ಪಾರ್ಕಿಂಗ್ ವ್ಯವಸ್ಥೆ, ವೀಕ್ಷಕರ ಗ್ಯಾಲರಿ, ಕೋಣಗಳ ನಿರ್ವಹಣೆ ಹಾಗೂ ಆಯೋಜಕರ ತಾತ್ಕಾಲಿಕ ವಸತಿ ವ್ಯವಸ್ಥೆಗಳನ್ನು ಗಮನದಲ್ಲಿಟ್ಟು ನಿರ್ಧಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಈ ಕಂಬಳ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ವಿಜಯ್ ಕುಮಾರ್, ಬೆಂಗಳೂರು ಕಂಬಳ ವರ್ಕಿಂಗ್ ಪ್ರೆಸಿಡೆಂಟ್ ಮುರುಳಿಧರ್ ರೈ, ಜಯಸೂರ್ಯ ರೈ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಂಘಟಕರು ಉಪಸ್ಥಿತರಿದ್ದರು.
ಇದೇ ವೇಳೆ, ಇತ್ತೀಚೆಗೆ ದಟ್ಟಗಳ್ಳಿಯ ಬಳಿ ರೆಸ್ಟೋರೆಂಟ್ನಲ್ಲಿ ಸಂಭವಿಸಿದ ಅಗ್ನಿ ದುರಂತವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಎರಡು ಅಥವಾ ಮೂರನೇ ಮಹಡಿಯಲ್ಲಿ ತಾತ್ಕಾಲಿಕ ನಿರ್ಮಾಣ ಮಾಡಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಡೆಸಲಾಗುತ್ತಿರುವ ಬಾರ್ ಮತ್ತು ರೆಸ್ಟೋರೆಂಟ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ನಗರದ ವಿವಿಧ ಬಾರ್ ಮತ್ತು ಪಬ್ಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಮೈಸೂರು ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಒಂದು ವಾರದೊಳಗೆ ಪರಿಶೀಲನೆ ನಡೆಸಿ ಟ್ರೇಡ್ ಲೈಸೆನ್ಸ್ ರದ್ದುಪಡಿಸುವ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಅದೇ ರೀತಿ, ಅಬಕಾರಿ ಇಲಾಖೆಯ ಅನುಮತಿ ಇಲ್ಲದೆ ಮದ್ಯ ಮಾರಾಟ ಮಾಡುವುದು ಹಾಗೂ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುವ ಬಾರ್ ಮತ್ತು ಪಬ್ಗಳ ವಿರುದ್ಧ ನಿರಂತರ ತಪಾಸಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಲೋಪ ಕಂಡುಬಂದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.





