ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ದಸರಾ ಚಲನಚಿತ್ರೋತ್ಸವಕ್ಕೆ ಈ ಬಾರಿ ಬ್ರೇಕ್ ಹಾಕಲಾಗಿದೆ. ಪ್ರೇಕ್ಷಕರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಚಿತ್ರೋತ್ಸವವನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದ ಚಿತ್ರೋತ್ಸವದಲ್ಲಿ ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ಸಿನಿಮಾಗಳು, ಪ್ರಾದೇಶಿಕ ಚಿತ್ರಗಳು ಹಾಗೂ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ಹೊಸಬರು ಹಾಗೂ ವಿಭಿನ್ನ ಪ್ರಯತ್ನಗಳ ಮೂಲಕ ಮೂಡಿಬಂದ ಸಿನಿಮಾಗಳಿಗೆ ಪ್ರೇಕ್ಷಕರನ್ನು ತಲುಪಲು ಇದು ಉತ್ತಮ ವೇದಿಕೆಯಾಗಿತ್ತು. ಆದರೆ, ಚಿತ್ರೋತ್ಸವಕ್ಕೆ ಖರ್ಚು ಮಾಡುವ ಹಣಕ್ಕೆ ಹೋಲಿಸಿದರೆ ಪ್ರೇಕ್ಷಕರ ಹಾಜರಾತಿ ತೀರಾ ಕಡಿಮೆಯಾಗುತ್ತಿದೆ ಎಂಬ ಕಾರಣವನ್ನು ಜಿಲ್ಲಾಡಳಿತ ಮುಂದಿಟ್ಟಿದೆ.
ಚಿತ್ರೋತ್ಸವ ಆಯೋಜನೆಗೆ ಸುಮಾರು 40ರಿಂದ 45 ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತು ಎನ್ನಲಾಗಿದ್ದು, ಕೆಲ ಸಿನಿಮಾಗಳ ಪ್ರದರ್ಶನಕ್ಕೆ ಕೇವಲ 5-6 ಮಂದಿ ಮಾತ್ರ ಆಗಮಿಸುತ್ತಿದ್ದರು ಎಂಬ ಅಂಶವೂ ಆಡಳಿತದ ನಿರ್ಧಾರಕ್ಕೆ ಕಾರಣವಾಗಿದೆ. ಹೀಗಾಗಿ ಹಲವು ವರ್ಷಗಳ ಇತಿಹಾಸ ಹೊಂದಿರುವ ಚಿತ್ರೋತ್ಸವವನ್ನು ಈ ಬಾರಿ ಕೈಬಿಡಲಾಗಿದೆ.
ಈ ನಿರ್ಧಾರದ ವಿರುದ್ಧ ನಿರ್ದೇಶಕ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದಭಿರುಚಿಯ ಪ್ರೇಕ್ಷಕರ ವರ್ಗವನ್ನು ಬೆಳೆಸಲು ಇರುವ ಸೀಮಿತ ಅವಕಾಶಗಳನ್ನೇ ಸರ್ಕಾರ ಕೈಬಿಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗದ ಅನೇಕ ಕನ್ನಡ ಸಿನಿಮಾಗಳು ದಸರಾ ಚಿತ್ರೋತ್ಸವದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಾಧ್ಯವಾಗಿತ್ತು. ಹೀಗಾಗಿ ಸರ್ಕಾರ ತನ್ನ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡ ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ‘ಚಿತ್ರನಗರಿ’ ಸ್ಥಾಪನೆಯಾಗುತ್ತಿರುವ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಕೊಕ್ ನೀಡಿರುವುದು ಬೇಸರದ ಸಂಗತಿ. ಇದು ಕನ್ನಡ ಚಿತ್ರೋದ್ಯಮಕ್ಕೆ ಮಾಡಿದ ಅಪಮಾನವಾಗಿದ್ದು, ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.
ಮೈಸೂರು ಹಾಗೂ ಕನ್ನಡ ಚಿತ್ರರಂಗಕ್ಕೆ ಅವಿನಾಭಾವ ಸಂಬಂಧವಿದೆ. 1945ರಲ್ಲಿ ಕರ್ನಾಟಕದ ಮೊದಲ ಸ್ಟುಡಿಯೋ ಎಂದು ಗುರುತಿಸಿಕೊಂಡಿದ್ದ ನವಜ್ಯೋತಿ ಸ್ಟುಡಿಯೋ ಮೈಸೂರಿನಲ್ಲೇ ಸ್ಥಾಪನೆಯಾಗಿತ್ತು. ಬಳಿಕ ಪ್ರೀಮಿಯರ್ ಸ್ಟುಡಿಯೋ ಏಷ್ಯಾದಲ್ಲೇ ಅತಿ ದೊಡ್ಡ ಸ್ಟುಡಿಯೋ ಎಂಬ ಖ್ಯಾತಿಯನ್ನೂ ಪಡೆದಿತ್ತು.
ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್ ಸೇರಿದಂತೆ ಹಲವು ದಿಗ್ಗಜರು, ನಿರ್ದೇಶಕರು ಹಾಗೂ ತಂತ್ರಜ್ಞರು ಮೈಸೂರಿನ ಚಿತ್ರರಂಗದ ಇತಿಹಾಸದೊಂದಿಗೆ ನಂಟು ಹೊಂದಿದ್ದಾರೆ. ಇಂತಹ ಶ್ರೀಮಂತ ಸಿನಿಮಾ ಪರಂಪರೆ ಹೊಂದಿರುವ ಮೈಸೂರಿನಲ್ಲಿ ದಸರಾ ಚಿತ್ರೋತ್ಸವವನ್ನು ಮುಂದುವರಿಸಬೇಕು ಎಂಬುದು ಚಿತ್ರರಂಗದ ಗಣ್ಯರು ಹಾಗೂ ಸಿನಿಪ್ರೇಮಿಗಳ ಒತ್ತಾಯವಾಗಿದೆ.





