ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಚಾಮುಂಡಿಬೆಟ್ಟದಲ್ಲಿ ಕೊಪ್ಪಳದ ಅನ್ನದಾಸೋಹಿ, ಅಕ್ಷರ ದಾಸೋಹಿ ಎಂದೇ ಪ್ರಸಿದ್ಧರಾದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಡಹಬ್ಬಕ್ಕೆ ಚಾಲನೆ ನೀಡಿದರು. ಈ ಮೂಲಕ ಮೈಸೂರು ನಗರದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ನಾಡಿನಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಪುಷ್ಪಾರ್ಚನೆ ಮೂಲಕ ದಸರಾ ಉದ್ಘಾಟನೆ
ಚಾಮುಂಡಿಬೆಟ್ಟದಲ್ಲಿ ನಿಗದಿತ ಶುಭ ಲಗ್ನದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮವು ದಸರಾ ಉತ್ಸವದ ಆರಂಭಕ್ಕೆ ಸಾಕ್ಷಿಯಾಯಿತು.
ದಸರಾ ಉದ್ಘಾಟನೆಗಾಗಿ ಚಾಮುಂಡಿಬೆಟ್ಟದಲ್ಲಿ ವಿಶೇಷ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆಯಲು ಭಕ್ತರು ಆಗಮಿಸಿದ್ದು, ಬೆಟ್ಟದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.
ನೇರಳೆ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ
ದಸರಾ ಉದ್ಘಾಟನೆಯ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೇರಳೆ ಬಣ್ಣದ ಸೀರೆಯಲ್ಲಿ ತಾಯಿ ಚಾಮುಂಡೇಶ್ವರಿ ಕಂಗೊಳಿಸಿದ್ದು, ಭಕ್ತರ ಗಮನ ಸೆಳೆದಿದೆ. ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ದಸರಾ ಆಚರಣೆಗೆ ಧಾರ್ಮಿಕ ಮೆರುಗು ನೀಡಲಾಯಿತು.
ಗಣ್ಯರ ಉಪಸ್ಥಿತಿಯಲ್ಲಿ ನಾಡಹಬ್ಬದ ಸಂಭ್ರಮ
ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಿವಕುಮಾರ್ ಪತ್ನಿ ಉಷಾ, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಚಿವ ಈಶ್ವರ ಖಂಡ್ರೆ. ರಾಜ್ಯದ ವಿವಿಧ ಮಠದ ಮಠಾದೀಶರು, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ತಾಯಿ ಚಾಮುಂಡೇಶ್ವರಿಗೆ ಈಡುಗಾಯಿ ಒಡೆದು ಭಕ್ತಿ ಸಮರ್ಪಿಸಿದರು. ನಂತರ ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಶ್ರೀಗಳಿಗೆ ಶಿವಕುಮಾರ್ ಅವರು ಸನ್ಮಾನಿದರು.
ಮೈಸೂರು ದಸರಾ ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ನಂಬಿಕೆ ಮತ್ತು ಐತಿಹಾಸಿಕ ವೈಭವವನ್ನು ಪ್ರತಿಬಿಂಬಿಸುವ ಪ್ರಮುಖ ಉತ್ಸವವಾಗಿದೆ. ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ಈ ನಾಡಹಬ್ಬದ ಅಂಗವಾಗಿ ಮುಂದಿನ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳು ಮತ್ತು ಮನರಂಜನಾ ಚಟುವಟಿಕೆಗಳು ನಡೆಯಲಿವೆ.
ಇನ್ನು ಅ. 20ರಂದು ಮಹಾನವಮಿ ಮತ್ತು ಅಯುಧಪೂಜೆ, ಅಕ್ಟೋಬರ್ 21ರಂದು ವಿಜಯದಶಮಿ, ಜಂಬೂಸವಾರಿ ಮತ್ತು ದಸರಾ ಸಮಾರೋಪ ನಡೆಯಲಿದೆ.




