ಚಿತ್ರದುರ್ಗದ ಶ್ರೀ ಮುರುಘಾ ಮಠದ ಮುಖ್ಯಸ್ಥ ಶಿವಮೂರ್ತಿ ಮುರುಘಾ ಶರಣರಿಗೆ ಪೋಕ್ಸೋ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮುರುಘಾ ಶ್ರೀಗಳನ್ನು ಸಂಪೂರ್ಣ ನಿರ್ದೋಷಿಗಳೆಂದು ಘೋಷಿಸಿ, ಆರೋಪಿಗಳಿಗೆ ಬಿಗ್ ರಿಲೀಫ್ ನೀಡಿದೆ.
ನ್ಯಾಯಮೂರ್ತಿ ಗಂಗಾಧರಪ್ಪ ಚನ್ನಬಸಪ್ಪ ಹಡಪದ ಅವರು ಪ್ರಕಟಿಸಿದ ತೀರ್ಪಿನಲ್ಲಿ ಪ್ರಮುಖ ಆರೋಪಿ (A1) ಡಾ. ಶಿವಮೂರ್ತಿ ಮುರುಘಾ ಶರಣರು, ಎರಡನೇ ಆರೋಪಿ ರಶ್ಮಿ ಹಾಗೂ ನಾಲ್ಕನೇ ಆರೋಪಿ ಮಠದ ಮಾಜಿ ಮ್ಯಾನೇಜರ್ ಪರಮಶಿವಯ್ಯ ಈ ಮೂವರೂ ಸಂಪೂರ್ಣ ನಿರ್ದೋಷರು ಎಂದು ಸ್ಪಷ್ಟವಾಗಿ ಘೋಷಿಸಿದ್ದಾರೆ. ಆದರೆ ದೀರ್ಘ ವಿಚಾರಣೆ ಮತ್ತು ಸಾಕ್ಷ್ಯ-ಪುರಾವೆಗಳ ಸಮಗ್ರ ಪರಿಶೀಲನೆ ಬಳಿಕ ನ್ಯಾಯಾಲಯ ಆರೋಪಿಗಳ ತಪ್ಪಿತಸ್ಥರಲ್ಲ ಎಂದು ತೀರ್ಮಾನಿಸಿದೆ.
ಮುರುಘಾ ಮಠದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂಬ ದೂರು ದಾಖಲಾಗಿತ್ತು. ಒಡನಾಡಿ ಸಂಸ್ಥೆಯ ಸದಸ್ಯರು ಮತ್ತು ಬಾಲಕಿಯರ ತಾಯಂದಿರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನಂತರ ತನಿಖೆಯನ್ನು ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ನಂತರ ಮುರುಘಾ ಶ್ರೀಗಳನ್ನು ಬಂಧಿಸಲಾಗಿತ್ತು.
ಪ್ರಕರಣದ ಹಿನ್ನೆಲೆ: ಆರಂಭ ದಿಂದ ತೀರ್ಪಿನವರೆಗೆ
ಪ್ರಕರಣವು 2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಸಂತ್ರಸ್ತ ಬಾಲಕಿಯರಿಂದ ದೂರು ಸಲ್ಲಿಸುವುದರೊಂದಿಗೆ ಆರಂಭವಾಯಿತು. ಮುರುಘಾ ಮಠದ ಹಾಸ್ಟೆಲ್‌ನಲ್ಲಿ ನಡೆದ ಲೈಂಗಿಕ ಕಿರುಕುಳದ ಆರೋಪಗಳಿದ್ದು, ಈ ದೂರಿನ ನಂತರ ಆಗಸ್ಟ್ 27 ರಂದು ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಯಿತು. ಸೆಪ್ಟೆಂಬರ್ 1, 2022 ರಂದು ಪೊಲೀಸರು ಶ್ರೀಗಳನ್ನು ಬಂಧಿಸಿ, ತನಿಖೆ ನಡೆಸಿದ ನಂತರ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಈ ಮಧ್ಯೆ, ನವೆಂಬರ್ 16, 2023 ರಂದು ಕರ್ನಾಟಕ ಹೈಕೋರ್ಟ್‌ನ ಸೂಚನೆಯಂತೆ ಶ್ರೀಗಳಿಗೆ ಜಾಮೀನು ದೊರೆತಿತ್ತು. ಆದರೆ, ಏಪ್ರಿಲ್ 29, 2024 ರಂದು ಸುಪ್ರೀಂ ಕೋರ್ಟ್ ಈ ಜಾಮೀನು ರದ್ದುಗೊಳಿಸಿ, ಮೂರು ತಿಂಗಳಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಿ ಮುಕ್ತಾಯಗೊಳಿಸುವಂತೆ ಗಡುವು ನೀಡಿತ್ತು. ಈ ಸೂಚನೆಯಂತೆ, ಅಕ್ಟೋಬರ್ 7, 2024 ರಂದು ಮೊದಲ ಕೇಸ್‌ನ ಸಾಕ್ಷಿಗಳ ವಿಚಾರಣೆಯನ್ನು ಕೋರ್ಟ್ ಮುಕ್ತಾಯಗೊಳಿಸಿತು. ಒಟ್ಟು 13 ಸಾಕ್ಷಿಗಳು, ಅವುಗಳಲ್ಲಿ ಇಬ್ಬರು ಸಂತ್ರಸ್ತ ಬಾಲಕಿಯರ ಸಾಕ್ಷ್ಯಗಳು ಸೇರಿದಂತೆ, ವಿಚಾರಣೆಯಲ್ಲಿ ಭಾಗವಹಿಸಿದ್ದರು.
ಇಬ್ಬರು ಸಂತ್ರಸ್ತರ ದೂರುಗಳ ಕುರಿತು ಪ್ರತ್ಯೇಕ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇಂದಿನ ತೀರ್ಪು ವಿಚಾರಣೆಯಲ್ಲಿ ಸಂತ್ರಸ್ತರ ಪರ ಸರ್ಕಾರಿ ಅಭಿಯೋಜಕ ಎಚ್.ಆರ್. ಜಗದೀಶ್ ವಾದ ಮಂಡಿಸಿದ್ದರು, ತೀರ್ಪುಗಾರ ಪಕ್ಷದಲ್ಲಿ A1 ಶಿವಮೂರ್ತಿ ಮುರುಘಾ ಶರಣರು, A2 ಲೇಡಿ ವಾರ್ಡನ್ ರಶ್ಮಿ ಮತ್ತು A3 ಮಠದ ಮ್ಯಾನೇಜರ್ ಪರಮಶಿವಯ್ಯ ಸೇರಿದಂತೆ ಆರೋಪಿಗಳ ಪರ ಹೈಕೋರ್ಟ್ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದ್ದರು. ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಜಿ.ಸಿ. ಹಡಪದ ಅವರು ಇಂದು ತೀರ್ಪು ಪ್ರಕಟಿಸಿದರು.





