ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ಧದ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಜೆಡಿಎಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಮತ್ತು ಅವರ ಪತ್ನಿ ಮಂಜುಳಾ (ಮಾಜಿ ಬಿಬಿಎಂಪಿ ಸದಸ್ಯೆ) ವಿರುದ್ಧ ಹನಿಟ್ರ್ಯಾಪ್ ಸಂಚು ರೂಪಿಸಿದ ಆರೋಪದಲ್ಲಿ ಸಿಐಡಿ ಎಸ್‌ಐಟಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಲಯವು ಮರು ತನಿಖೆ ನಡೆಸುವಂತೆ ಎಸ್‌ಐಟಿಗೆ ಆದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್ 30ಕ್ಕೆ ಮುಂದೂಡಿದೆ.
ಈ ಪ್ರಕರಣದಲ್ಲಿ ಲಗ್ಗೆರೆ ನಾರಾಯಣಸ್ವಾಮಿ 2024ರ ಡಿಸೆಂಬರ್‌ನಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಶಾಸಕ ಮುನಿರತ್ನ ಅವರು ತನ್ನನ್ನು ಮತ್ತು ಪತ್ನಿ ಮಂಜುಳಾ ಅವರನ್ನು ತೇಜೋವಧೆಗೆ ಒಳಪಡಿಸಲು ಹನಿಟ್ರ್ಯಾಪ್ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಲ್ಲದೆ ಪತ್ನಿಯ ಕೊಲೆಗೆ ಷಡ್ಯಂತ್ರ ಮಾಡಿ ಸುಪಾರಿ ನೀಡಿದ್ದಾರೆ ಎಂಬ ಗಂಭೀರ ಆರೋಪಗಳೂ ಇದ್ದವು. ದೂರಿನ ಅನ್ವಯ ಮುನಿರತ್ನ ವಿರುದ್ಧ ವಿವಿಧ ಕಲಮುಗಳ ಅಡಿಯಲ್ಲಿ ಪ್ರಕರಣ ದಾಖಲಾಗಿ, ತನಿಖೆಗೆ ಸಿಐಡಿ ಎಸ್‌ಐಟಿಗೆ ವರ್ಗಾಯಿಸಲಾಗಿತ್ತು.
ಎಸ್‌ಐಟಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ಸಾಕ್ಷ್ಯಗಳ ಕೊರತೆ ಉಲ್ಲೇಖಿಸಿ ‘ಬಿ’ ರಿಪೋರ್ಟ್ (ಕ್ಲೋಜರ್ ರಿಪೋರ್ಟ್) ಸಲ್ಲಿಸಿದ್ದರು. ಆದರೆ ದೂರುದಾರ ಲಗ್ಗೆರೆ ನಾರಾಯಣಸ್ವಾಮಿ ಇದನ್ನು ಪ್ರಶ್ನಿಸಿ ಮರು ಅರ್ಜಿ ಸಲ್ಲಿಸಿದ್ದರು. ಪ್ರತಿಭಟನಾ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ‘ಬಿ’ ರಿಪೋರ್ಟ್ ಅನ್ನು ರದ್ದುಗೊಳಿಸಿದೆ. ಧ್ವನಿಮುದ್ರಣ ಸೇರಿದಂತೆ ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗಿದ್ದರೂ ಪೊಲೀಸರು ಸಮರ್ಪಕ ತನಿಖೆ ನಡೆಸದೆ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ದೂರುದಾರರ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ವಾದ ಮಂಡಿಸಿದ್ದರು. ಪೊಲೀಸರು ಸೂಕ್ತ ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ನ್ಯಾಯಾಲಯದ ಈ ಆದೇಶದಿಂದ ಪ್ರಕರಣ ಮತ್ತೆ ಚುರುಕುಗೊಂಡಿದ್ದು, ಮುನಿರತ್ನ ವಿರುದ್ಧದ ತನಿಖೆ ಮುಂದುವರಿಯಲಿದೆ. ಈ ಪ್ರಕರಣ ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.





