ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ-ಮಗು ಬಲಿಯಾಗಿರುವ ಘಟನೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
22 ವರ್ಷದ ನರ್ಮದಾ ಎಂಬ ಬಾಣಂತಿ ಮಹಿಳೆಯನ್ನು ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್‌ಗೆ ಒಳಪಡಿಸಿದ್ದ ವೈದ್ಯೆ ಡಾ. ವಾಣಿರೆಡ್ಡಿ ಅವರು ಆಪರೇಷನ್ ವೇಳೆ ತಪ್ಪು ಮಾಡಿ ಸಣ್ಣ ಕರುಳು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ನರ್ಮದಾ ಸಾವನ್ನಪ್ಪಿದ್ದಾಳೆ. ಆಕೆಯ 2 ತಿಂಗಳ ಎಳೆ ಮಗುವೂ ತಾಯಿಯ ಎದೆಹಾಲು ಇಲ್ಲದೆ ನಾಲ್ಕು ದಿನಗಳಲ್ಲಿ ಮೃತಪಟ್ಟಿದೆ.
ನರ್ಮದಾ ಆಪರೇಷನ್ ನಂತರ ಗಂಭೀರ ಸ್ಥಿತಿಯಲ್ಲಿದ್ದರೂ ವೈದ್ಯರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ವೈದ್ಯರ ಅಸಡ್ಡೆಯಿಂದ ಈ ದುರಂತ ಸಂಭವಿಸಿದೆ ಎಂದು ಅವರು ಹೇಳುತ್ತಿದ್ದಾರೆ.
ನರ್ಮದಾ ಮೃತದೇಹವನ್ನು ಆಸ್ಪತ್ರೆ ಮುಂದೆ ಇಟ್ಟು ಕುಟುಂಬಸ್ಥರು ರಾತ್ರಿ ಇಡೀ ಪ್ರತಿಭಟನೆ ನಡೆಸಿದರು. “ನಮ್ಮ ತಾಯಿ-ಮಗುವಿಗೆ ನ್ಯಾಯ ಕೊಡಿ” ಎಂದು ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ವೈದ್ಯೆ ವಾಣಿರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಟುಂಬಸ್ಥರು “ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಈ ಘಟನೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹದಗೆಟ್ಟ ವ್ಯವಸ್ಥೆಯನ್ನು ಮತ್ತೊಮ್ಮೆ ಬಯಲು ಮಾಡಿದೆ.
ಈ ದುರಂತಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ತನಿಖೆಗೆ ಆದೇಶಿಸಿದೆ. ಹಾಲು ಕುಡಿಯುವ ಎಳೆ ಕಂದ ತಾಯಿಯ ಎದೆ ಹಾಲಿಲ್ಲದೆ ಹೇಗೆ ತಾನೇ ಬದುಕಬೇಕು ಹಾಲು ಕುಡಿಸೋ ತಾಯಿಯೇ ಅಸುನೀಗಿದರೆ ಯಾವ ಅವಳನ್ನೇ ನೆಚ್ಚಿಕೊಂಡ ಯಾವ ಮಗು ತಾನೇ ಬದುಕುತ್ತದೆ. ವೈದ್ಯರು ಮಾಡಿದ ಸಣ್ಣ ಯಡವಟ್ಟು ತಾಯಿ ಮಗು ಇಬ್ಬರ ಜೀವವನ್ನೇ ತೆಗೆದುಕೊಂಡಿದೆ.





