ಮೂಡುಬಿದಿರೆ, ಮಾರ್ಚ್ 16: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳು ಕೇಳಿಬಂದಿವೆ. ಇನ್ಸ್‌ಪೆಕ್ಟರ್ ಕಾಮಪುರಾಣ ಬಯಲು ಮಾಡುವ ಇನ್ನೊಂದು ಆಡಿಯೋ ಮತ್ತು ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.
ಮಹಿಳೆಯೊಬ್ಬಳು ತನ್ನ ಗಂಡನನ್ನು ಬಂಧನದಿಂದ ಬಿಡುಗಡೆ ಮಾಡುವ ವಿಚಾರದಲ್ಲಿ ಮಹಿಳೆಗೆ ಒತ್ತಡ ಹಾಕಿದ್ದಾಗಿ ಆರೋಪಿಸಲಾಗಿದೆ. ಈ ಪ್ರಕರಣದ ಹಿನ್ನೆಲೆಲ್ಲಿಯೇ ಮಹಿಳೆ ಹಾಗೂ ಇನ್ಸ್‌ಪೆಕ್ಟರ್ ನಡುವೆ ನಡೆದ ಮಾತುಕತೆಯ ಆಡಿಯೋ ಹೊರಬಂದಿದ್ದು, ಇದರಲ್ಲಿ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದು ಕೇಳಿಬರುತ್ತದೆ.
8 ವರ್ಷಗಳ ಸಂಬಂಧ, ಈಗ ಮಗಳ ಮೇಲೆ ಕಣ್ಣು
ವೈರಲ್ ಆದ ಆಡಿಯೋದಲ್ಲಿ ಸಂತ್ರಸ್ತೆ ಮಹಿಳೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಸಿಡಿದೆದ್ದಿದ್ದಾರೆ. ಸುಮಾರು 8 ವರ್ಷಗಳಿಂದ ತನಗೆ ಅನೈತಿಕ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಇನ್ಸ್‌ಪೆಕ್ಟರ್, ಈಗ ತನ್ನ ಮಗಳ ಮೇಲೂ ಕಣ್ಣು ಹಾಕಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. “ಎಂಟು ವರ್ಷ ನಿನ್ನನ್ನು ಸಹಿಸಿಕೊಂಡೆ, ಆದರೆ ನನ್ನ ಮಗಳ ಮೇಲೆ ಕಣ್ಣು ಹಾಕಿದ್ದು ಸರಿಯಲ್ಲ. ನೀನು ಅವಳ ತಂಟೆಗೆ ಬಂದರೆ ನಿನ್ನನ್ನು ಬಿಡುವುದಿಲ್ಲ, ಒಂದು ಗತಿ ಕಾಣಿಸುತ್ತೇನೆ” ಎಂದು ಮಹಿಳೆ ಆಡಿಯೋದಲ್ಲಿ ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂದೇಶ್, “ತಾಯಿಗೆ ಮಾಡಿದ ಮೇಲೆ ಮಗಳಿಗೂ ಮಾಡಬೇಕಲ್ಲ” ಎಂಬ ನೀಚ ಮಾತುಗಳನ್ನಾಡಿರುವುದು ಆಡಿಯೋದಲ್ಲಿ ಸೆರೆಯಾಗಿದೆ.
ಈ ನಡುವೆ ಇನ್ನೊಂದು ಆರೋಪವೂ ಕೇಳಿ ಬಂದಿದೆ. ಈ ಇನ್ಸ್‌ಪೆಕ್ಟರ್ ಕಾಮಾಂಧತೆಯ ಸಿಸಿಟಿವಿ ದೃಶ್ಯವೊಂದು ಕೂಡ ಲಭ್ಯವಾಗಿದೆ. ರಾತ್ರಿ ವೇಳೆ ಗಸ್ತು ತಿರುಗುವ ವೇಷದಲ್ಲಿ, ಒಬ್ಬಂಟಿ ಮಹಿಳೆಯರ ಮನೆಯ ಕಾಂಪೌಂಡ್ ಹಾರಿ ಅಕ್ರಮವಾಗಿ ಪ್ರವೇಶಿಸುವ ದೃಶ್ಯ ಅದಾಗಿದೆ. ಆ ಮಹಿಳೆಯ ಪತಿ ದುಬೈನಲ್ಲಿದ್ದು, ಈ ಅವಕಾಶವನ್ನು ಬಳಸಿಕೊಂಡು ಸಂದೇಶ್ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ.
50 ಲಕ್ಷ ಕೊಟ್ಟು ಪೋಸ್ಟಿಂಗ್ ಪಡೆದ ಬೆದರಿಕೆ:
ದೂರು ನೀಡಿದ ಮಹಿಳೆಯರ ಪ್ರಕಾರ, ತಮ್ಮ ಮೇಲಿನ ದಬ್ಬಾಳಿಕೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ವಿಚಾರವಾಗಿ ಮಾತನಾಡಲು ಹೋದ ಮಹಿಳೆಯರಿಗೆ ಸಂದೇಶ್ ಬೆದರಿಕೆ ಹಾಕಿದ್ದಾರೆ. “ನೀವು ಪೊಲೀಸ್ ಕಮಿಷನರ್‌ಗಾಗಲಿ, ಗೃಹ ಸಚಿವರಿಗಾಗಲಿ ದೂರು ಕೊಟ್ಟರೂ ನನ್ನನ್ನು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ಗೃಹ ಸಚಿವರಿಗೇ 50 ಲಕ್ಷ ರೂಪಾಯಿ ಕೊಟ್ಟು ಇಲ್ಲಿ ಪೋಸ್ಟಿಂಗ್ ಪಡೆದಿದ್ದೇನೆ” ಎಂದು ದರ್ಪದಿಂದ ಹೇಳಿರುವುದಾಗಿ ಮಹಿಳೆಯರು ಆರೋಪಿಸಿದ್ದಾರೆ.
ಈಗಾಗಲೇ ಹಲವಾರು ಮಹಿಳೆಯರು ಈತನ ವಿರುದ್ಧ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸಂತ್ರಸ್ತೆ ಮಹಿಳೆ ಮಾತನಾಡಿ, “ನನ್ನ ಮಗಳನ್ನು ಮುಟ್ಟಿದರೆ ನಿನ್ನ ಬೆನ್ನು ಮುರಿದು ಹಾಕುತ್ತೇನೆ. ನಾನು ಕಮಿಷನರ್‌ಗೆ ಎಲ್ಲವನ್ನೂ ತಿಳಿಸುತ್ತೇನೆ. 8 ವರ್ಷ ನಿನ್ನ ಜೊತೆಗಿದ್ದೆ, ನಿನ್ನ ಬದುಕು ಹಾಳಾಗಬಾರದು ಎಂದು ಸುಮ್ಮನಿದ್ದೆ. ಆದರೆ ಈಗ ನನ್ನ ಮಗಳ ತಂಟೆಗೆ ಬಂದಿದ್ದೀಯಲ್ಲ, ಇದು ನನ್ನ ಫೈನಲ್ ವಾರ್ನಿಂಗ್” ಎಂದು ಆಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.





