MLC ಟಿಕೆಟ್ ಕೊಡಿಸುವುದಾಗಿ ಹೇಳಿ ಮಹಿಳೆಗೆ ₹1.50 ಕೋಟಿ ವಂಚನೆ: ಮೂವರ ವಿರುದ್ಧ FIR

Your paragraph text (12)

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ (MLC) ಸದಸ್ಯ ಸ್ಥಾನ ಕೊಡಿಸುವುದಾಗಿ ನಂಬಿಸಿ ಸಮಾಜಸೇವೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬರಿಂದ ಸುಮಾರು ₹1.50 ಕೋಟಿ ಹಣ ಪಡೆದು ವಂಚಿಸಿರುವ ಆರೋಪದಡಿ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯರಿಸ್ವಾಮಿ ಹಾಗೂ ಆತನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಎಂಬುವವರು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ನಾಯಕರ ಫೋಟೋ ತೋರಿಸಿ ವಿಶ್ವಾಸ ಗಳಿಸಿದ್ದ ಆರೋಪಿ

ಮಂಗಳೂರು ಮೂಲದ ಸಂತ್ರಸ್ತೆ ಖಾಸಗಿ ಟ್ರಸ್ಟ್ ಒಂದರ ಮೂಲಕ ಕ್ಯಾನ್ಸರ್ ಮುಕ್ತ ಅಭಿಯಾನ ಸೇರಿದಂತೆ ಹಲವು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಸೇವೆಯಲ್ಲಿ ಆಕರ್ಷಿತರಾದ ವ್ಯಕ್ತಿ, ಆಕೆಯನ್ನು ಬಲೆಗೆ ಬೀಳಿಸಲು ಪ್ಲಾನ್‌ ಮಾಡಿದ್ದ. ನಂತರ ಪರಿಚಯ ಮಾಡಿಕೊಂಡ ಯರಿಸ್ವಾಮಿ ತಾನು ಕಾಂಗ್ರೆಸ್‌ನ ಪ್ರಮುಖ ನಾಯಕರ ಮಾಧ್ಯಮ ಸಲಹೆಗಾರ ಹಾಗೂ ಹೈಕಮಾಂಡ್‌ನ ನಿಕಟವರ್ತಿ ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ, ಪ್ರಭಾವಿ ರಾಜಕಾರಣಿಗಳ ಜೊತೆಗಿರುವ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸ ಗಿಟ್ಟಿಸಿಕೊಂಡಿದ್ದ. “ನನಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರೆಲ್ಲರೂ ಚೆನ್ನಾಗಿ ಗೊತ್ತು, ರಾಜ್ಯದ ಎಲ್ಲ ಪ್ರಮುಖ ರಾಜಕಾರಣಿಗಳೂ ನನ್ನ ಪರಿಚಯದವರೇ” ಎಂದು ಆರೋಪಿ ಹೇಳಿಕೊಂಡಿದ್ದಾನೆ.

₹5 ಕೋಟಿಗೆ ಬೇಡಿಕೆ, ₹1.25 ಕೋಟಿಗೆ ಡೀಲ್

“ನೀವು ಇಷ್ಟೊಂದು ಸಮಾಜಸೇವೆ ಮಾಡುತ್ತಿದ್ದೀರಿ, ವಿಧಾನ ಪರಿಷತ್‌ ಸದಸ್ಯರಾದರೆ (MLC) ಇನ್ನು ಹೆಚ್ಚಿನ ಸೇವೆ ಮಾಡಬಹು” ಎಂದು ಪುಸಲಾಯಿಸಿದ ಆರೋಪಿ, ಆರಂಭದಲ್ಲಿ ₹5 ಕೋಟಿ ಬೇಡಿಕೆ ಇಟ್ಟಿದ್ದ. ಮಹಿಳೆ ಅಷ್ಟು ಹಣವಿಲ್ಲ ಎಂದು ತಿಳಿಸಿದಾಗ, ಕಡೆಗೆ ₹1.25 ಕೋಟಿಗೆ ಡೀಲ್ ಕುದುರಿಸಲಾಗಿತ್ತು. ಆದರೆ, 2024ರ ಆಗಸ್ಟ್‌ನಿಂದ 2025ರ ಜನವರಿ ನಡುವಿನ ಅವಧಿಯಲ್ಲಿ ಆರೋಪಿ ಯರಿಸ್ವಾಮಿ ಹಾಗೂ ಆತನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಸೇರಿ ವಿವಿಧ ಹಂತಗಳಲ್ಲಿ ಒಟ್ಟು ₹1.50 ಕೋಟಿ ಪಡೆದುಕೊಂಡಿದ್ದಾರೆ. ಸಂತ್ರಸ್ತೆಯು ಆರೋಪಿಗಳಿಗೆ ಕಂತುಗಳಲ್ಲಿ ಹಣ ನೀಡಿದ್ದಳು.

ಹಣ ಹಸ್ತಾಂತರ ಎಲ್ಲಿ?

ಮೈಸೂರು ಬ್ಯಾಂಕ್ ಸರ್ಕಲ್ ಸಮೀಪದ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಈ ಹಣ ಹಸ್ತಾಂತರವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರತಿ ಬಾರಿಯೂ, ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸಲು ಮುಂದಿನ ಹಂತದ ಪಾವತಿ ಅಗತ್ಯವಿದೆ ಎಂದು ಮಹಿಳೆಯನ್ನು ನಂಬಿಸಲಾಗಿದೆ. ಹಣ ಪಡೆದ ಬಳಿಕ ಆರೋಪಿಗಳು ಸಂತ್ರಸ್ತೆಯನ್ನು ದೆಹಲಿಗೆ ಕರೆದೊಯ್ದಿದ್ದರು.

ದೆಹಲಿಯಲ್ಲಿ ಅಸಭ್ಯ ವರ್ತನೆ, ಜೀವ ಬೆದರಿಕೆ:

ಹಣ ಪಡೆದ ಬಳಿಕ ಹೈಕಮಾಂಡ್ ನಾಯಕರ ಭೇಟಿ ನೆಪದಲ್ಲಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದಿದ್ದ ಆರೋಪಿ, ಅಲ್ಲಿ ಆಕೆಯನ್ನು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ಇರಿಸಿದ್ದ. ಈ ವೇಳೆ ಆರೋಪಿ ಯರಿಸ್ವಾಮಿ ಮಹಿಳೆಯ ಕೊಠಡಿಯ ಬಾಗಿಲು ತಟ್ಟಿ, ಆಕೆಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆ ತಕ್ಷಣ ಬಾಗಿಲು ಲಾಕ್ ಮಾಡಿಕೊಂಡು ರಕ್ಷಣೆ ಪಡೆದಿದ್ದರು. ದಿನಗಳು ಕಳೆದರೂ MLC ಸ್ಥಾನ ಸಿಗದಿದ್ದಾಗ ಸಂತ್ರಸ್ತೆ ತಮ್ಮ ಹಣವನ್ನು ವಾಪಸ್ ಕೇಳಿದ್ದಾರೆ. ಈ ವೇಳೆ ಆರೋಪಿಗಳು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.

ಪೊಲೀಸರ ತನಿಖೆ

ಇದರಿಂದ ಕಂಗಾಲಾದ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸಂತ್ರಸ್ತೆ ನೀಡಿದ ದೂರಿನನ್ವಯ ಯರಿಸ್ವಾಮಿ, ಬಸವರಾಜು, ಸಿದ್ದರಾಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Exit mobile version