ಬೆಂಗಳೂರು: BMTC ಬಸ್ ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪದ ಮೇಲೆ ಸಂಜಯ ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ಅವರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಎಲ್ಲಿ ಮತ್ತು ಯಾವಾಗ?
ಬೆಂಗಳೂರಿನ ಗಂಗಮ್ಮನ ಗುಡಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ವೇಳೆ ಜಾಲಹಳ್ಳಿಗೆ ತೆರಳಲು ಬಸ್ ಹತ್ತಿದ್ದ ಮಂಜುನಾಥ್ ಅವರು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯ ಜೊತೆ ಮಾತಿಗೆ ಮಾತು ಬೆಳೆದು, ದೊಡ್ಡ ಕಿರಿಕ್ ಶುರುವಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ಕೂಡಲೇ ತನ್ನ ಸಂಬಂಧಿಕರಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾರೆ.
ಪೊಲೀಸ್ ಪೇದೆಗೆ ಥಳಿತ ಹೇಗೆ ನಡೆಯಿತು?
ಬಸ್ ಗಂಗಮ್ಮನ ಗುಡಿ ಸರ್ಕಲ್ ತಲುಪುತ್ತಿದ್ದಂತೆ, ಮಹಿಳೆಯ ಸಂಬಂಧಿಕರು ಮತ್ತು ಯುವಕರ ಗ್ಯಾಂಗ್ ಬಸ್ ಮುಂದೆ ನಿಂತುಕೊಂಡಿದ್ದರು. ಆರೋಪಿ ಮಂಜುನಾಥ್ ಅವರನ್ನು ಬಸ್‌ನಿಂದ ಕೆಳಗಿಳಿಸಿ, ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಯಿತು. “ನಾನು ಪೊಲೀಸ್, ಬಿಡಿ” ಎಂದು ಮಂಜುನಾಥ್ ಕೇಳಿಕೊಂಡರೂ, ಯುವಕರು ಕೇಳದೆ ಥಳಿಸಿದ್ದಾರೆ. ಈ ವೇಳೆ ಆರೋಪಿಯ ಬಟ್ಟೆ ಹರಿದು, ಮುಖದಲ್ಲಿ ರಕ್ತ ಹರಿಯುವಂತೆ, ಮೈಮೇಲೆ ಬಾಸುಂಡೆ ಬರುವಂತೆ ಬರ್ಬರ ಹಲ್ಲೆ ನಡೆಸಲಾಗಿದೆ. ಯುವಕರ ಗ್ಯಾಂಗ್ ಕೆಲವೇ ನಿಮಿಷಗಳಲ್ಲಿ ಆರೋಪಿಗೆ ಜುಟ್ಟು ಹಿಡಿದು ಹಲ್ಲೆ ನಡೆಸಿದ್ದಾರೆ.
ಗಾಯಗೊಂಡಿರುವ ಕಾನ್ಸ್ಟೇಬಲ್ ಮಂಜುನಾಥ್ ಅವರನ್ನು ಸ್ಥಳೀಯರು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅವರಿಗೆ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಮೈಕೈಗಳಲ್ಲಿ ಗಾಯಗಳಿವೆ. ಪ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡೂ ಕಡೆಗಳಿಂದ ದೂರು
ಈ ಘಟನೆಯಲ್ಲಿ ಎರಡೂ ಕಡೆಗಳಿಂದ ದೂರು ದಾಖಲಾಗಿದೆ. ಮಹಿಳೆಯು ಅಸಭ್ಯ ವರ್ತನೆಯ ಆರೋಪದ ಮೇಲೆ ಮಂಜುನಾಥ್ ವಿರುದ್ಧ ದೂರು ನೀಡಿದ್ದಾರೆ. ಇದೇ ವೇಳೆ, ಮಂಜುನಾಥ್ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ ಯುವಕರ ಗ್ಯಾಂಗ್ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಸಂಜಯ ನಗರ ಠಾಣಾ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
