ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಜನಸಾಮಾನ್ಯರ ಅಡುಗೆಮನೆಗೆ ತಟ್ಟಿದೆ.. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಬೆನ್ನಲ್ಲೇ, ರಾಜ್ಯದಲ್ಲಿ ಅಡುಗೆ ಎಣ್ಣೆಯ ದರವೂ ಏರಿಕೆ ಕಂಡಿದ್ದು ಗ್ರಾಹಕರಿಗೆ ಮತ್ತೊಂದು ಆರ್ಥಿಕ ಹೊರೆ ತಂದಿದೆ. ಕಳೆದ ಸುಮಾರು 10 ದಿನಗಳಲ್ಲಿ ಅಡುಗೆ ಎಣ್ಣೆಯ ದರ ಲೀಟರ್‌ಗೆ ₹7ರಿಂದ ₹11ರವರೆಗೆ ಹೆಚ್ಚಳವಾಗಿದೆ.
ಮಾರ್ಚ್ ಮೊದಲ ವಾರದಲ್ಲಿ ಇದ್ದ ದರಗಳಿಗಿಂತ ಈಗಿನ ದರಗಳು ಹೆಚ್ಚಾಗಿವೆ. ಸನ್‌ಫ್ಲವರ್ ಎಣ್ಣೆ ಸೇರಿದಂತೆ ಹಲವು ಬ್ರಾಂಡ್‌ಗಳ ಬೆಲೆ ಏರಿಕೆಯಾಗಿದೆ. ಉದಾಹರಣೆಗೆ, ಮಾರ್ಚ್ 4ರಂದು ಲೀಟರ್‌ಗೆ ₹167 ಇದ್ದ ಸನ್‌ಫ್ಲವರ್ ಎಣ್ಣೆಯ ದರ ಮಾರ್ಚ್ 12ರ ವೇಳೆಗೆ ₹172ಕ್ಕೆ ತಲುಪಿದೆ. ಅದೇ ರೀತಿ ಜನಪ್ರಿಯ ಬ್ರಾಂಡ್‌ಗಳಾದ “ಗೋಲ್ಡ್ ವಿನ್ನರ್” ಮತ್ತು “ಫ್ರೀಡಂ” ಎಣ್ಣೆಗಳ ದರವೂ ಹೆಚ್ಚಳ ಕಂಡಿವೆ.
ಮಾಹಿತಿಯ ಪ್ರಕಾರ, “ಗೋಲ್ಡ್ ವಿನ್ನರ್” ಎಣ್ಣೆಯ ಹೋಲ್‌ಸೇಲ್ ದರ ಲೀಟರ್‌ಗೆ ₹159ರಿಂದ ₹166ಕ್ಕೆ ಏರಿಕೆಯಾಗಿದೆ. “ಫ್ರೀಡಂ” ಎಣ್ಣೆಯ ಬೆಲೆ ₹158ರಿಂದ ₹166ಕ್ಕೆ ಏರಿಕೆ ಕಂಡಿದೆ. ಈ ಏರಿಕೆ ಗ್ರಾಹಕರಿಗೆ ನೇರ ಪರಿಣಾಮ ಬೀರುತ್ತಿದ್ದು, ದಿನನಿತ್ಯದ ಖರ್ಚು ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿಸಿದೆ.
ಆನ್‌ಲೈನ್ ಆ್ಯಪ್‌ಗಳಲ್ಲೂ ಹೆಚ್ಚಿದ ಬೆಲೆ
ಆಫ್‌ಲೈನ್ ಮಾರುಕಟ್ಟೆ ಮಾತ್ರವಲ್ಲ, ಆನ್‌ಲೈನ್ ಶಾಪಿಂಗ್ ವೇದಿಕೆಗಳಲ್ಲಿಯೂ ಅಡುಗೆ ಎಣ್ಣೆಯ ದರ ಏರಿಕೆಯಾಗಿದೆ. ಹಲವು ಆನ್‌ಲೈನ್ ಆ್ಯಪ್‌ಗಳಲ್ಲಿ ಲೀಟರ್‌ಗೆ ₹160 ಇದ್ದ ಎಣ್ಣೆ ಈಗ ₹171ರವರೆಗೆ ಮಾರಾಟವಾಗುತ್ತಿದೆ. ಈ ದರ ಏರಿಕೆ ಗ್ರಾಹಕರಿಗೆ ಅಚ್ಚರಿ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಚಿಲ್ಲರೆ ವ್ಯಾಪಾರಿಗಳ ಪ್ರಕಾರ, ಹೋಲ್‌ಸೇಲ್ ಮಾರುಕಟ್ಟೆಯಿಂದ ಸರಕು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಬೇಡಿಕೆ ಹೆಚ್ಚಾದರೂ, ವ್ಯಾಪಾರಿಗಳಿಗೆ ಬೇಕಾದಷ್ಟು ಎಣ್ಣೆ ದೊರೆಯುತ್ತಿಲ್ಲ. 100 ಬಾಕ್ಸ್‌ಗಳ ಆರ್ಡರ್ ನೀಡಿದರೆ ಕೇವಲ 20 ರಿಂದ 50 ಬಾಕ್ಸ್‌ಗಳಷ್ಟೇ ಪೂರೈಕೆ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುದ್ಧದ ಪರಿಣಾಮವೇ ಪ್ರಮುಖ ಕಾರಣ
ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಯುದ್ಧ ಪರಿಸ್ಥಿತಿ ಜಾಗತಿಕ ಮಾರುಕಟ್ಟೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಕಚ್ಚಾ ತೈಲ ಮತ್ತು ಆಹಾರ ತೈಲಗಳ ಆಮದು ಪ್ರಕ್ರಿಯೆ ಮೇಲೆ ಇದರಿಂದ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಅಡುಗೆ ಎಣ್ಣೆಯ ಬೆಲೆ ನಿಧಾನವಾಗಿ ಏರಿಕೆಯಾಗುತ್ತಿದೆ.
ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಯುದ್ಧ ಕ್ರಮಕ್ಕೆ ಮುಂದಾದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ. ಈ ಬೆಳವಣಿಗೆಯಿಂದಾಗಿ ತೈಲ ಸರಬರಾಜು ಸರಪಳಿ ಮೇಲೆ ಒತ್ತಡ ಉಂಟಾಗಿದ್ದು, ಅದರ ಪರಿಣಾಮಎಣ್ಣೆ ಸೇರಿದಂತೆ ಹಲವು ಉತ್ಪನ್ನಗಳ ದರ ಏರಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯ ಆತಂಕ
ಈಗಾಗಲೇ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜನತೆ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲೇ ಅಡುಗೆ ಎಣ್ಣೆಯ ದರವೂ ಹೆಚ್ಚಳ ಕಂಡಿರುವುದು ಕುಟುಂಬಗಳ ಖರ್ಚಿನ ಮೇಲೆ ಹೆಚ್ಚುವರಿ ಹೊರೆ ತಂದಿದೆ.





