ಮಂಗಳೂರಿನ ಧರ್ಮಸ್ಥಳದ ಬುರುಡೆ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ರಹಸ್ಯಮಯ ಪ್ರಕರಣವು ಇದೀಗ ರೋಚಕ ತಿರುವು ಪಡೆದುಕೊಂಡಿದ್ದು, ವಿಶೇಷ ತನಿಖಾ ತಂಡ (SIT) ಈ ಕೇಸ್‌ನ ಗುಟ್ಟನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಅಧಿಕಾರಿಗಳ ಎದುರು ಬುರುಡೆ ಗ್ಯಾಂಗ್ನ ಪ್ರಮುಖ ಆರೋಪಿ ಗಿರೀಶ್ ಮಟ್ಟಣ್ಣವರು ಬುರುಡೆಯ ಮೂಲ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಧರ್ಮಸ್ಥಳದ ಬಂಗ್ಲಗುಡ್ಡದ ಕಾಡಿನಿಂದ ಈ ತಲೆಬುರುಡೆಯನ್ನು ವಿಠಲ್ ಗೌಡ ತಂದಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಸ್ಪಾಟ್ 11a ಎಂಬ ಸ್ಥಳದಿಂದ ಕೆಲವೇ ದೂರದಲ್ಲಿ ಈ ಬುರುಡೆ ಸಿಕ್ಕಿತ್ತು ಎಂದು ವಿಠಲ್ ಗೌಡ ತಿಳಿಸಿದ್ದಾನೆ. ಆದರೆ, ಆ ಸ್ಥಳದಲ್ಲಿ ಕೇವಲ ತಲೆಬುರುಡೆಯೊಂದೇ ದೊರೆತಿದ್ದು, ಅಸ್ಥಿಪಂಜರದ ಯಾವುದೇ ಭಾಗಗಳು ಪತ್ತೆಯಾಗಿಲ್ಲ. ಈ ಬುರುಡೆಯು ಮರದ ಕೆಳಗಿನ ಭೂಮಿಯ ಮೇಲ್ಭಾಗದಲ್ಲಿ ಕಂಡುಬಂದಿದೆ.
ತನಿಖೆಯ ಭಾಗವಾಗಿ, SIT ತಂಡವು ಬಂಗ್ಲಗುಡ್ಡದ ಕಾಡಿನಲ್ಲಿ ಅಸ್ಥಿಪಂಜರಕ್ಕಾಗಿ ತೀವ್ರ ಹುಡುಕಾಟ ನಡೆಸಿತ್ತು. ಈ ಸಂದರ್ಭದಲ್ಲಿ, ಬುರುಡೆ ಸಿಕ್ಕ ಸ್ಥಳದಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ, ಫಾರೆನ್ಸಿಕ್ ವಿಶ್ಲೇಷಣೆಗಾಗಿ FSL (ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ)ಗೆ ರವಾನಿಸಲಾಗಿದೆ.
ಗಿರೀಶ್ ಮಟ್ಟಣ್ಣವರ್ ಈ ಪ್ರಕರಣದ ಮತ್ತೊಂದು ಪ್ರಮುಖ ವ್ಯಕ್ತಿಯಾಗಿದ್ದು, ಇವರು SITಗೆ ಬುರುಡೆ ಕುರಿತಾದ ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಆದರೆ SIT ತಂಡವು ಇನ್ನಷ್ಟು ಆಳವಾದ ತನಿಖೆಯನ್ನು ನಡೆಸುತ್ತಿದೆ. ಬುರುಡೆ ದೊರೆತ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಇತರ ಸಾಕ್ಷ್ಯಗಳನ್ನು ಕಲೆಹಾಕಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.





