ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ಕೆಲವು ದಿನಗಳಿಂದ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ‘ಮದ್ರಾಸ್ ಐ’ (Madras Eye) ಅಥವಾ ಕಣ್ಣಿನ ಉರಿ ಸೋಂಕು ವೇಗವಾಗಿ ಹರಡುತ್ತಿದೆ. ಹವಾಮಾನದಲ್ಲಿನ ತೇವಾಂಶ ಮತ್ತು ಶೀತಗಾಳಿಯ ಕಾರಣದಿಂದಾಗಿ ವೈರಾಣುಗಳು ಸಕ್ರಿಯವಾಗಿದ್ದು, ಶಾಲಾ ಮಕ್ಕಳಲ್ಲಿ ಈ ಸಮಸ್ಯೆ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯರು ಪೋಷಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಸೋಂಕು ಹರಡಲು ಕಾರಣವೇನು?
ಬೆಂಗಳೂರಿನ ಬದಲಾದ ಹವಮಾನ ಮತ್ತು ಮಳೆಯ ನಂತರದ ತೇವಾಂಶವು ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ಬೆಳವಣಿಗೆಗೆ ಪೂರಕವಾಗಿದೆ. ಇದು ಒಬ್ಬರಿಂದ ಒಬ್ಬರಿಗೆ ಅತ್ಯಂತ ವೇಗವಾಗಿ ಹರಡುವ ಸೋಂಕಾಗಿದ್ದು, ಶಾಲೆಯಲ್ಲಿ ಮಕ್ಕಳು ಒಟ್ಟಾಗಿ ಇರುವುದರಿಂದ ಒಬ್ಬರಿಗೆ ಸೋಂಕು ತಗುಲಿದರೂ ಇಡೀ ಗುಂಪಿಗೆ ಹರಡುವ ಸಾಧ್ಯತೆ ಇರುತ್ತದೆ. ಧೂಳು, ಮಾಲಿನ್ಯ ಮತ್ತು ಅಲರ್ಜಿ ಕೂಡ ಈ ಸಮಸ್ಯೆಯನ್ನು ಹೆಚ್ಚಾಗಿ ಮಾಡಬಹುದಾಗಿದೆ.
ಪ್ರಮುಖ ಲಕ್ಷಣಗಳು:
-
ಕಣ್ಣುಗಳು ಕೆಂಪಾಗುವುದು ಮತ್ತು ಅತಿಯಾದ ಉರಿ ಕಾಣಿಸಿಕೊಳ್ಳುವುದು.
-
ಕಣ್ಣಿನಿಂದ ನಿರಂತರವಾಗಿ ನೀರು ಸುರಿಯುವುದು ಅಥವಾ ಕಣ್ಣೀರು ಬರುವುದು.
-
ಬೆಳಿಗ್ಗೆ ಎದ್ದಾಗ ಕಣ್ಣಿನ ರೆಪ್ಪೆಗಳು ಅಂಟಿಕೊಳ್ಳುವುದು.
-
ಬೆಳಕನ್ನು ನೋಡಲು ಕಷ್ಟವಾಗುವುದು ಮತ್ತು ಕಣ್ಣುಗಳಲ್ಲಿ ಕಿರಿಕಿರಿ ಉಂಟಾಗುವುದು.
ಪೋಷಕರು ಮತ್ತು ಮಕ್ಕಳು ವಹಿಸಬೇಕಾದ ಮುನ್ನೆಚ್ಚರಿಕೆಗಳು:
ವೈದ್ಯರ ಪ್ರಕಾರ, ಸೋಂಕು ಕಾಣಿಸಿಕೊಂಡ ತಕ್ಷಣ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಸೋಂಕಿತರು ಬಳಸಿದ ಟವಲ್, ಕಾಜಲ್, ಮೇಕಪ್ ಕಿಟ್ ಅಥವಾ ಲೆನ್ಸ್‌ಗಳನ್ನು ಇತರರು ಬಳಸಬಾರದು. ಪದೇ ಪದೇ ಸಾಬೂನಿನಿಂದ ಕೈ ತೊಳೆಯಬೇಕು ಜೊತೆಗೆ ಕಣ್ಣುಗಳನ್ನು ಆಗಾಗ ಮುಟ್ಟಿಕೊಳ್ಳುವುದು, ಅಥವಾ ಕಣ್ಣನ್ನ ಉಜ್ಜಿಕೊಳ್ಳುವುದರಿಂದ ಈ ಸಮಸ್ಯೆ ಹೆಚ್ಚಾಗುತ್ತದೆ. ಕಣ್ಣಿಗೆ ವಿಶ್ರಾಂತಿ ನೀಡಲು ಮೊಬೈಲ್ ಮತ್ತು ಟಿವಿ ನೋಡುವುದನ್ನ ಸಂಪೂರ್ಣವಾಗಿ ನಿಲ್ಲಿಸಬೇಕು.
ಏನು ಮಾಡಬಾರದು?
ಅನೇಕರು ಕಣ್ಣಿನ ಸೋಂಕು ಕಾಣಿಸಿಕೊಂಡಾಗ ತಾವೇ ಮನೆಮದ್ದುಗಳನ್ನು ಮಾಡಿಕೊಳ್ಳುತ್ತಾರೆ ಅಥವಾ ವೈದ್ಯರ ಸಲಹೆ ಇಲ್ಲದೆ ಮೆಡಿಕಲ್ ಶಾಪ್‌ಗಳಿಂದ ಐಡ್ರಾಪ್ಸ್ ತಂದು ಬಳಸುತ್ತಾರೆ. ಇದು ಕಣ್ಣಿನ ದೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ, ಕೂಡಲೇ ಕಣ್ಣಿನ ತಜ್ಞರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಶೀತಗಾಳಿ ಇರುವವರೆಗೂ ಮಕ್ಕಳ ಕಣ್ಣಿನ ರಕ್ಷಣೆ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.





