ಮದ್ದೂರು ತಾಲೂಕಿನ ರಾಮ್ ರಹೀಂ ನಗರದ ಚನ್ನೇಗೌಡ ಬಡಾವಣೆಯಲ್ಲಿ ಮೊನ್ನೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಗಾಯಗೊಂಡ ಯುವಕ ಅಜಯ್, ಗ್ಯಾರಂಟಿ ನ್ಯೂಸ್‌ನೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಭಯ, ಆತಂಕ ಮತ್ತು ಆಕ್ರೋಶವನ್ನು ಹುಟ್ಟುಹಾಕಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಗಣೇಶ ಚತುರ್ಥಿಯ ವಿಸರ್ಜನೆ ಸಂದರ್ಭದಲ್ಲಿ ಅಜಯ್ ಅವರ ತಮ್ಮ ಗಣೇಶ ವಿಗ್ರಹದ ಮೆರವಣಿಗೆಗೆ ತೆರಳಿದ್ದ. ಅವನನ್ನು ಕರೆತರಲು ಹೋದಾಗ ಈ ಘಟನೆ ನಡೆದಿದೆ. ಅಜಯ್ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ್ದು, ತನ್ನ ತಮ್ಮನಿಗೆ ಫೋನ್ ಮಾಡಲು ಮೊಬೈಲ್ ತೆಗೆದಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನೀನು ವಿಡಿಯೋ ತೆಗೆಯುತ್ತಿದ್ದೀಯಾ?” ಎಂದು ಪ್ರಶ್ನಿಸಿ, ಒಂದು ಗುಂಪು ದೊಣ್ಣೆ ಮತ್ತು ರಾಡ್‌ಗಳಿಂದ ಗಾಯಗೊಳಿಸಿದ್ದಾರೆ ಎಂದರು. ಈ ದಾಳಿಯಿಂದ ಅಜಯ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಏರಿಯಾದಲ್ಲಿ ಕೆಲವು ಸಮುದಾಯದ ಜನರಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಅಜಯ್ ಆರೋಪಿಸಿದ್ದಾರೆ. “ಗಣೇಶ ವಿಸರ್ಜನೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೂ, ತಮಟೆ ಬಾರಿಸಿದರೆ ವಿರೋಧಿಸಲಾಗುತ್ತದೆ. ಮೃತರ ಅಂತಿಮ ಯಾತ್ರೆಯ ಸಂದರ್ಭದಲ್ಲೂ ಇಂತಹ ಘರ್ಷಣೆಗಳು ಸಂಭವಿಸುತ್ತವೆ,” ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಮ್ ರಹೀಂ ನಗರದಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲಲ್ಲ. ಈ ಹಿಂದೆಯೂ ಕೋಮು ಘರ್ಷಣೆಗಳು ಮತ್ತು ದೌರ್ಜನ್ಯದ ಆರೋಪಗಳು ಕೇಳಿಬಂದಿವೆ. ಸ್ಥಳೀಯ ನಿವಾಸಿಗಳ ಪ್ರಕಾರ, ಈ ಪ್ರದೇಶದಲ್ಲಿ ಶಾಂತಿಯುತ ಸಹಬಾಳ್ವೆಗೆ ಧಕ್ಕೆ ತರುವಂತಹ ಘಟನೆಗಳು ಹೆಚ್ಚುತ್ತಿವೆ. “ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಇಂತಹ ಘಟನೆಗಳು ಮತ್ತಷ್ಟು ಉಲ್ಬಣಗೊಳ್ಳಬಹುದು,” ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
“ನಾವು ಕೇವಲ ನಮ್ಮ ಸಂಸ್ಕೃತಿಯನ್ನು ಆಚರಿಸುತ್ತಿದ್ದೇವೆ. ಆದರೆ, ಇದಕ್ಕೆ ಆಕ್ಷೇಪಿಸಿ ದಾಳಿ ಮಾಡುವುದು ಎಲ್ಲಿಯ ತನಕ ಸರಿ?” ಎಂದು ಗಾಯಾಳು ಅಜಯ್ ಪ್ರಶ್ನಿಸಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಭರವಸೆ ನೀಡಿದೆ.





