ಮಂಡ್ಯ: ಮದ್ದೂರು ಪಟ್ಟಣದಲ್ಲಿ ಇಂದು ಸಾರ್ವಜನಿಕ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆಗೆ ಭವ್ಯವಾದ ಶೋಭಾಯಾತ್ರೆ ನಡೆಯುತ್ತಿದೆ. ಸುಮಾರು 30ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಒಳಗೊಂಡ ಈ ಮೆರವಣಿಗೆಯಲ್ಲಿ 30 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದು, ಪಟ್ಟಣಾದ್ಯಂತ ಹಿಂದೂ ಶಕ್ತಿಯ ಪ್ರದರ್ಶನವಾಗಿ, “ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು” ಎಂಬ ಜಯಘೋಷದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ.
ಮದ್ದೂರಿನ ಎಂ.ಸಿ. ರಸ್ತೆಯ ಮಾರ್ಗದಲ್ಲಿ ವೇದಿಕೆಗಳನ್ನು ನಿರ್ಮಿಸಲಾಗಿದೆ. ಮೆರವಣಿಗೆಯ ಮಾರ್ಗದುದ್ದಕ್ಕೂ ಕಾರ್ಯಕರ್ತರಿಗೆ ಪಾನಕ ಮತ್ತು ಮಜ್ಜಿಗೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಶಾಮಿಯಾನಗಳನ್ನು ಹಾಕಿ, ಭಕ್ತರಿಗೆ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಸುತ್ತಮುತ್ತಲಿನ ಗ್ರಾಮಗಳಿಂದ ಗಣೇಶ ಮೂರ್ತಿಗಳು ಆಗಮಿಸುತ್ತಿವೆ. ಚಿಕ್ಕ ಮೂರ್ತಿಗಳಿಂದ ಹಿಡಿದು ದೊಡ್ಡ ದೊಡ್ಡ ಗಣೇಶ ವಿಗ್ರಹಗಳವರೆಗೆ ಎಲ್ಲವೂ ಟಿಬಿ ಸರ್ಕಲ್‌ನಲ್ಲಿ ಜಮಾಯಿಸುತ್ತಿವೆ.
ಮೆರವಣಿಗೆಯ ವಿವರ
ಮದ್ದೂರಿನ ಐಬಿ ವೃತ್ತದಿಂದ ಆರಂಭವಾಗುವ ಈ ಮೆರವಣಿಗೆ, ಪೇಟೆಬೀದಿ ಮತ್ತು ಕೊಲ್ಲಿ ಸರ್ಕಲ್ ಮಾರ್ಗವಾಗಿ ಸಾಗಿ, ಶಿಂಷಾ ನದಿಯ ತೀರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯೊಂದಿಗೆ ಕೊನೆಗೊಳ್ಳಲಿದೆ. ಒಟ್ಟು 3 ಕಿ.ಮೀ ದೂರದ ಈ ಶೋಭಾಯಾತ್ರೆಯಲ್ಲಿ 28ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಭಾಗಿಯಾಗಿದ್ದು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಕ್ತರು ಮತ್ತು ಕಾರ್ಯಕರ್ತರು “ಹಿಂದೂ ಹಿಂದೂ” ಎಂಬ ಘೋಷಣೆ ಕೂಗುತ್ತಿದ್ದಾರೆ.
ಭದ್ರತೆಯ ಕಟ್ಟೆಚ್ಚರ
ಎರಡು ದಿನಗಳ ಹಿಂದೆ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲು ತೂರಾಟದಂತಹ ಅಹಿತಕರ ಘಟನೆ ನಡೆದಿದ್ದರಿಂದ, ಈ ಬಾರಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮದ್ದೂರು ಪಟ್ಟಣಾದ್ಯಂತ ಸರ್ಪಗಾವಲು ಮಾಡಲಾಗಿದ್ದು, ಮುಂಜಾಗೃತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ರೀತಿಯ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗಿದೆ.





