ಮಲೆನಾಡಿನ ಹೃದಯ ಭಾಗ ಎಂದೇ ಖ್ಯಾತವಾಗಿರುವ ಶಿವಮೊಗ್ಗ ಜಿಲ್ಲೆಯು ಪ್ರಕೃತಿಯ ಸೌಂದರ್ಯದಿಂದ ಸಮೃದ್ಧವಾಗಿದೆ. ಜೋಗ, ಸಕ್ರೆಬೈಲು, ಕುಪ್ಪಳ್ಳಿ ಮುಂತಾದ ಪ್ರವಾಸಿ ತಾಣಗಳ ಜೊತೆಗೆ ಸಿಗಂದೂರು ಚೌಡೇಶ್ವರಿ ದೇವಾಲಯವು ರಾಜ್ಯದಾದ್ಯಂತ ಭಕ್ತರನ್ನು ಆಕರ್ಷಿಸುತ್ತದೆ. ಈ ಪುಣ್ಯಸ್ಥಾನಕ್ಕೆ ತಲುಪಲು ಶರಾವತಿ ನದಿಯ ದಡದಲ್ಲಿ ಹೊಸದಾದ ಕೇಬಲ್ ಸೇತುವೆ ನಿರ್ಮಾಣವಾಗಿದ್ದು, ಇದರ ಲೋಕಾರ್ಪಣೆ ಜುಲೈ 14 ರಂದು ನಡೆಯಲಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಈ ಕೇಬಲ್ ಸೇತುವೆ ಶರಾವತಿ ನದಿಯ ಹಿನ್ನೀರಿನ ಮೇಲೆ ನಿರ್ಮಾಣವಾಗಿರುವುದರಿಂದ, ಸ್ಥಳೀಯರಿಗೆ ಸಂಪರ್ಕದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದಾಗಿದೆ. ಈ ಸೇತುವೆ ಸಾಗರ ತಾಲೂಕಿನ ಜನರಿಗೆ ಪಕ್ಕದ ಊರುಗಳಿಗೆ ತೆರಳಲು ಸುಗಮ ಮಾರ್ಗವನ್ನು ಒದಗಿಸಲಿದೆ. ಇದರಿಂದ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಜನರ ಈ ಬೇಡಿಕೆಗೆ ಸ್ಪಂದಿಸಿ, 2019ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 450 ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿಗೆ ಚಾಲನೆ ನೀಡಿದರು. 2020ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಿ, ಈಗ ಪೂರ್ಣಗೊಂಡಿದೆ. ಈ ಸೇತುವೆ ದೇಶದಲ್ಲೇ ಎರಡನೇ ಅತಿದೊಡ್ಡ ಕೇಬಲ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2.24 ಕಿಲೋಮೀಟರ್ ಉದ್ದ ಮತ್ತು 16 ಮೀಟರ್ ಅಗಲವಿರುವ ಈ ಸೇತುವೆ 740 ಮೀಟರ್ ಕೇಬಲ್‌ಗಳ ಆಧಾರದ ಮೇಲೆ ನಿರ್ಮಿತವಾಗಿದೆ.
ಈ ಸೇತುವೆಯಿಂದ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಮತ್ತು ಸ್ಥಳೀಯರಿಗೆ ದೊಡ್ಡ ರೀತಿಯ ಸೌಕರ್ಯವಾಗಲಿದೆ. ಸೇತುವೆಯಿಂದ ಸಾಗರ ತಾಲೂಕಿನೊಂದಿಗೆ ನೇರ ಸಂಪರ್ಕ ಸಾಧ್ಯವಾಗುವುದರಿಂದ, ವ್ಯಾಪಾರ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಸುಗಮವಾಗಲಿವೆ.
ಸೇತುವೆಯ ಪ್ರಮುಖ ವಿಶೇಷತೆಗಳು
-
ಉದ್ದ: 2,125 ಮೀಟರ್ (2.1 ಕಿಲೋಮೀಟರ್)
-
ಅಗಲ: 16 ಮೀಟರ್
-
ಕೇಬಲ್ ಎತ್ತರ: 38.5 ಮೀಟರ್
-
ಫುಟ್ಪಾತ್: 2 × 1.5 ಮೀಟರ್ (ಪಾದಚಾರಿಗಳಿಗೆ ಸುರಕ್ಷಿತ ಮಾರ್ಗ)
-
ಸಂಪರ್ಕ ರಸ್ತೆ: 1.05 ಕಿಮೀ ರಿಂದ 3 ಕಿಮೀ ವರೆಗೆ
-
ತಳಪಾಯ: 164 ಫೈಲ್ಗಳು (ಭದ್ರವಾದ ನಿರ್ಮಾಣ)
-
ಉಕ್ಕಿನ ಕೇಬಲ್ ಉದ್ದ: 470 ಮೀಟರ್
ನಾಳೆಯ ಲೋಕಾರ್ಪಣೆ ಕಾರ್ಯಕ್ರಮವು ಶಿವಮೊಗ್ಗ ಜಿಲ್ಲೆಯ ಜನರಿಗೆ ಹೊಸ ಆಶಾಕಿರಣವನ್ನು ತಂದಿದೆ. ಈ ಸೇತುವೆಯಿಂದ ಮಲೆನಾಡಿನ ಜನರ ಜೀವನದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಲಿದೆ, ಮತ್ತು ಇದು ಶರಾವತಿಯ ದಡದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿ ದಾಖಲಾಗಲಿದೆ.





