ಬೆಂಗಳೂರು, ಜನವರಿ 12: ಸಸ್ಯಕಾಶಿ ಎಂದೇ ಖ್ಯಾತಿ ಪಡೆದಿರುವ ಲಾಲ್‌ಬಾಗ್ ಮತ್ತೊಮ್ಮೆ ಹೂವಿನ ಸೌಂದರ್ಯದಿಂದ ಕಂಗೊಳಿಸಲು ಸಿದ್ಧವಾಗಿದೆ. ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆ ಈ ಬಾರಿ 219ನೇ ಫಲಪುಷ್ಪ ಪ್ರದರ್ಶನವನ್ನು ಜನವರಿ 14ರಿಂದ 26ರವರೆಗೆ ಆಯೋಜಿಸಿದೆ. ಒಟ್ಟು 13 ದಿನಗಳ ಕಾಲ ನಡೆಯಲಿರುವ ಈ ಫ್ಲವರ್ ಶೋಗೆ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಈ ಬಾರಿಯ ಲಾಲ್‌ಬಾಗ್ ಫ್ಲವರ್ ಶೋಗೆ ವಿಶೇಷ ಥೀಮ್ ಆಯ್ಕೆ ಮಾಡಲಾಗಿದ್ದು, ಖ್ಯಾತ ಸಾಹಿತಿ, ಪರಿಸರ ಪ್ರೇಮಿ ಹಾಗೂ ಪ್ರಾಣಿ–ಪಕ್ಷಿ ಸಂರಕ್ಷಣೆಯ ಹೋರಾಟಗಾರ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಸಾಹಿತ್ಯವೇ ಪ್ರದರ್ಶನದ ಕೇಂದ್ರಬಿಂದುವಾಗಿದೆ. ಪ್ರಕೃತಿ ಮತ್ತು ಮಾನವ ಬದುಕಿನ ನಡುವಿನ ಸಂಬಂಧವನ್ನು ತಮ್ಮ ಕೃತಿಗಳಲ್ಲಿ ಜೀವಂತವಾಗಿ ಚಿತ್ರಿಸಿದ ತೇಜಸ್ವಿಯವರ ಬದುಕಿನ ವಿವಿಧ ಆಯಾಮಗಳನ್ನು ಹೂಗಳ ಮೂಲಕ ಪರಿಚಯಿಸುವ ಪ್ರಯತ್ನ ಈ ಬಾರಿ ಮಾಡಲಾಗಿದೆ.
ಜನವರಿ 14ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಫ್ಲವರ್ ಶೋ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಯ ಬಳಿಕ ಸಂಜೆ 5 ಗಂಟೆಯಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿದ ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್. ಗಿರೀಶ್, “ಇದು 219ನೇ ಫಲಪುಷ್ಪ ಪ್ರದರ್ಶನ. ಲಾಲ್‌ಬಾಗ್‌ನಲ್ಲಿ ಮೊದಲ ಫ್ಲವರ್ ಶೋ 1912ರಲ್ಲಿ ಆಯೋಜಿಸಲಾಗಿತ್ತು. ಆಗಿನಿಂದಲೂ ಈ ಪ್ರದರ್ಶನವು ಬೆಂಗಳೂರು ನಗರದ ಸಾಂಸ್ಕೃತಿಕ ಮತ್ತು ಪ್ರವಾಸಿ ಆಕರ್ಷಣೆಯಾಗಿ ರೂಪುಗೊಂಡಿದೆ” ಎಂದು ತಿಳಿಸಿದ್ದಾರೆ.
ಫ್ಲವರ್ ಶೋನಲ್ಲಿ ಏನೆಲ್ಲಾ ವಿಶೇಷ?
ಈ ಬಾರಿ ಲಾಲ್‌ಬಾಗ್‌ನ ಗಾಜಿನ ಮನೆಯನ್ನು ಸಂಪೂರ್ಣವಾಗಿ ತೇಜಸ್ವಿ ಅವರ ಲೋಕವನ್ನಾಗಿ ರೂಪಿಸಲಾಗಿದೆ. ಬೃಹತ್ ಬೆಟ್ಟಗಳು, ಹರಿಯುವ ನೀರಿನ ಝರಿಗಳು, ಪ್ರಾಣಿ–ಪಕ್ಷಿಗಳ ಪ್ರತಿಕೃತಿಗಳು, ಹಳ್ಳಿ ಬದುಕಿನ ಸೊಗಡು ಈ ಎಲ್ಲಾ ಅಂಶಗಳು ಪ್ರದರ್ಶನಕ್ಕೆ ಸಿದ್ದಗೊಂಡಿವೆ..
ತೇಜಸ್ವಿ ಹಾಗೂ ಅವರ ಪತ್ನಿಯ ಪ್ರತಿಕೃತಿ, ‘ಕರ್ವಾಲೋ’ ಕಾದಂಬರಿಯ ಕಾಲ್ಪನಿಕ ಚಿತ್ರಣ, ಬಿಳಿಗಿರಿರಂಗನ ಬೆಟ್ಟದ ಹಳ್ಳಿ ಸಂಸ್ಕೃತಿ, ಜಾನಪದ ಬದುಕು, ಡೊಳ್ಳು ಕುಣಿತದ ಸಾಂಸ್ಕೃತಿಕ ಸ್ಪರ್ಶ, ನಂದಿಗಿರಿಧಾಮ ಪ್ರಮುಖ ಆಕರ್ಷಣೆಯಾಗಲಿದೆ.
ಹೂಗಳ ವೈವಿಧ್ಯ ಮತ್ತು ಅಲಂಕಾರ
ಈ ಫ್ಲವರ್ ಶೋಗೆ ದೇಶದ ವಿವಿಧ ಭಾಗಗಳಿಂದ ಹೂಗಳನ್ನು ತರಿಸಲಾಗುತ್ತಿದೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಡಾರ್ಜಿಲಿಂಗ್ ಹಾಗೂ ವಯನಾಡು ಪ್ರದೇಶಗಳಿಂದ ವಿಶೇಷ ಜಾತಿಯ ಹೂಗಳು ಲಾಲ್‌ಬಾಗ್‌ಗೆ ಆಗಮಿಸಲಿವೆ.
ಒಟ್ಟು 95ಕ್ಕೂ ಹೆಚ್ಚು ವೈವಿಧ್ಯಮಯ ಹೂಗಳು ಹಾಗೂ 32 ಲಕ್ಷಕ್ಕೂ ಅಧಿಕ ಹೂಗಳಿಂದ ಗಾಜಿನ ಮನೆ ಮತ್ತು ಉದ್ಯಾನವನ್ನು ಅಲಂಕರಿಸಲಾಗುತ್ತಿದೆ. ಇದರಲ್ಲಿ 27 ಲಕ್ಷಕ್ಕೂ ಹೆಚ್ಚು ಹೂಗಳು ಲಾಲ್‌ಬಾಗ್‌ನಲ್ಲೇ ಬೆಳೆದವು ಎಂಬುದು ವಿಶೇಷ.
ಟಿಕೆಟ್ ದರ ಮತ್ತು ಪಾರ್ಕಿಂಗ್ ವ್ಯವಸ್ಥೆ
ಫ್ಲವರ್ ಶೋ ವೀಕ್ಷಣೆಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
-
ವಯಸ್ಕರಿಗೆ – ಸಾಮಾನ್ಯ ದಿನಗಳಲ್ಲಿ ₹80, ರಜೆ ದಿನಗಳಲ್ಲಿ ₹100
-
ಮಕ್ಕಳಿಗೆ – ₹30
-
6 ವರ್ಷದೊಳಗಿನ ಮಕ್ಕಳಿಗೆ – ಉಚಿತ ಪ್ರವೇಶ
ಅಲ್ಲದೆ, ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಕಳೆದ ಬಾರಿ ಲಾಲ್‌ಬಾಗ್ ಫ್ಲವರ್ ಶೋದಿಂದ ಸುಮಾರು 3 ಕೋಟಿ 5 ಲಕ್ಷ ರೂಪಾಯಿ ಆದಾಯ ಲಭಿಸಿತ್ತು. ಈ ಬಾರಿ ಸುಮಾರು 3 ಕೋಟಿ 2 ಲಕ್ಷ ರೂಪಾಯಿ ವೆಚ್ಚ ಮಾಡಿ ಪ್ರದರ್ಶನ ಆಯೋಜಿಸಲಾಗುತ್ತಿದ್ದು, 10 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಆರ್. ಗಿರೀಶ್ ಮಾಹಿತಿ ನೀಡಿದ್ದಾರೆ.





