ಬೆಂಗಳೂರು (ಜುಲೈ 14): ರಾಷ್ಟ್ರಕವಿ ಕುವೆಂಪು ವಿರಚಿತ ಕರ್ನಾಟಕದ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಯಲ್ಲಿ ಮಹತ್ವದ ಪರಿಷ್ಕರಣೆ ಮಾಡುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿದೆ. ನಾಡಗೀತೆಗೆ ಶತಮಾನೋತ್ಸವದ ಸಂಭ್ರಮದ ಬೆನ್ನಲ್ಲೇ, ಮೂಲ ಸಾಹಿತ್ಯದಲ್ಲಿದ್ದ ‘ಬೌದ್ಧ’ ಎಂಬ ಪದವನ್ನು ಮತ್ತೆ ಸೇರ್ಪಡೆಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಸಮಿತಿಯ ಶಿಫಾರಸಿನ ಪ್ರಕಾರ, ಪ್ರಸ್ತುತ ನಾಡಗೀತೆಯಲ್ಲಿರುವ ‘ಜೈನರುದ್ಯಾನ’ ಎಂಬ ಪದವನ್ನು ‘ಜೈನಬೌದ್ಧರುದ್ಯಾನ’ ಎಂದು ಬದಲಾಯಿಸಲು ಸಲಹೆ ನೀಡಲಾಗಿದೆ. ಕುವೆಂಪು ಅವರ ಮೂಲ ಕೃತಿಯಲ್ಲಿ ಬೌದ್ಧ ಧರ್ಮದ ಉಲ್ಲೇಖವಿದ್ದರೂ, ಕಾಲಕ್ರಮೇಣ ಅದು ಗೀತೆಯಿಂದ ಕೈಬಿಟ್ಟಿದೆ ಎನ್ನಲಾಗಿದೆ. ಈ ಐತಿಹಾಸಿಕ ಅಂಶವನ್ನು ಮರುಸ್ಥಾಪಿಸುವ ಉದ್ದೇಶದಿಂದ ಈ ಬದಲಾವಣೆಯನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದರ ಜೊತೆಗೆ, ದಿವಂಗತ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿರುವ ಜನಪ್ರಿಯ ಗಾಯನ ಶೈಲಿಯಲ್ಲೇ ಹೊಸ ಪದವನ್ನು ಸಹಜವಾಗಿ ಅಳವಡಿಸುವ ಉದ್ದೇಶದಿಂದ ಮತ್ತೊಂದು ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಹಿರಿಯ ಸಾಹಿತಿಗಳು, ಸಂಶೋಧಕರು ಹಾಗೂ ಶಿಕ್ಷಣ ತಜ್ಞರು ಸದಸ್ಯರಾಗಿದ್ದು, ಹೊಸ ಸಂಯೋಜನೆ ಕುರಿತು ಸಲಹೆ ನೀಡಲಿದ್ದಾರೆ.
ಸಮಿತಿಯಲ್ಲಿ ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ. ಚಿದಾನಂದ ಗೌಡ, ಪ್ರೊ. ಕಾಳೇಗೌಡ ನಾಗವಾರ, ಎಸ್.ಜಿ. ಸಿದ್ದರಾಮಯ್ಯ, ಡಾ. ಮೂಡ್ನಕೂಡು ಚಿನ್ನಸ್ವಾಮಿ, ಡಾ. ಸಿ.ಎಸ್. ದ್ವಾರಕನಾಥ್, ಡಾ. ಮೀನಾಕ್ಷಿ ಬಾಳಿ ಹಾಗೂ ಡಾ. ಎಂ.ಎಸ್. ಆಶಾದೇವಿ ಸೇರಿದಂತೆ ಹಲವು ಗಣ್ಯರು ಸ್ಥಾನ ಪಡೆದಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರು 1924ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಲ್ಲಿ ಈ ಗೀತೆಯನ್ನು ರಚಿಸಿದ್ದರು. ಬಳಿಕ ಅದು ‘ಕೊಳಲು’ ಕವನ ಸಂಕಲನದ ಮೂಲಕ ಕನ್ನಡಿಗರಿಗೆ ಪರಿಚಿತವಾಯಿತು. ಇತ್ತೀಚೆಗೆ ನಾಡಗೀತೆಯ ಶತಮಾನೋತ್ಸವವನ್ನು ರಾಜ್ಯಾದ್ಯಂತ ಆಚರಿಸಿದ ಬೆನ್ನಲ್ಲೇ, ಕುವೆಂಪು ಅವರ ಮೂಲ ಸಾಹಿತ್ಯವನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಈ ಪರಿಷ್ಕರಣೆಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಬೌದ್ಧ ಧರ್ಮದ ಇತಿಹಾಸ, ಪರಂಪರೆ ಹಾಗೂ ಅದರ ಸಾಮಾಜಿಕ ಮಹತ್ವದ ಬಗ್ಗೆ ಹೆಚ್ಚಿನ ಗಮನ ಹರಿಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾಪಕ್ಕೆ ಮಹತ್ವ ಸಿಕ್ಕಿದೆ.
ಈ ಸಂಬಂಧ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡರೆ, ಶಾಲೆಗಳು, ಕಾಲೇಜುಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಲಾಗುವ ನಾಡಗೀತೆಯ ಹೊಸ ಆವೃತ್ತಿ ಜಾರಿಯಾಗುವ ಸಾಧ್ಯತೆ ಇದೆ.





