ಬೆಂಗಳೂರು, ಅಕ್ಟೋಬರ್ 15: ವೈದ್ಯೆಯಾಗಿದ್ದ ಕೃತಿಕಾ ರೆಡ್ಡಿ ಅವರ ಸಾವಿನ ಹಿಂದಿನ ರಹಸ್ಯಗಳನ್ನು ಅವರ ತಂದೆ ಮುನಿರೆಡ್ಡಿ ಅವರು ಪಿನ್ ಟು ಪಿನ್ ಆಗಿ ವಿವರಿಸಿದ್ದಾರೆ. ಅಳಿಯನಾಗಿದ್ದ ವೈದ್ಯ ಮಹೇಂದ್ರ ರೆಡ್ಡಿ ಅವರು ತಮ್ಮ ಮಗಳನ್ನು ಕೊಂದಿದ್ದು ಹೇಗೆ ಎಂಬುದನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ.
ಕೃತಿಕಾ ರೆಡ್ಡಿ ಅವರ ತಂದೆ ಮುನಿರೆಡ್ಡಿ ಅವರ ಹೇಳಿಕೆಯು ಘಟನೆಯ ವಿವರಣೆಯನ್ನು ನೀಡುತ್ತದೆ. ಏಪ್ರಿಲ್ 21ರ ರಾತ್ರಿ ಅವರ ಮನೆಯಲ್ಲಿ ಮಹೇಂದ್ರ ಅವರು ಕೃತಿಕಾ ಅವರಿಗೆ ಇಂಜೆಕ್ಷನ್ ಕೊಟ್ಟಿದ್ದರಂತೆ. ಮರುದಿನ ಏಪ್ರಿಲ್ 22ರಂದು ಕಾಲಿಗೆ ಕ್ಯಾನುಲಾ ಹಾಕಿ ಅವರನ್ನು ಮುನಿರೆಡ್ಡಿ ಅವರ ಮನೆಗೆ ಬಿಟ್ಟಿದ್ದರು. ಬೆಳಗ್ಗೆ ಕೃತಿಕಾ ಅವರನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದ ಮಹೇಂದ್ರ ಅವರು ರಾತ್ರಿ ಮರಳಿ ಬಂದು ಮತ್ತೊಂದು ಡೋಸ್ ಇಂಜೆಕ್ಷನ್ ಕೊಟ್ಟಿದ್ದರಂತೆ.
ಏಪ್ರಿಲ್ 23ರ ರಾತ್ರಿಯವರೆಗೂ ಕೃತಿಕಾ ಅವರು ಸಂಪೂರ್ಣ ಆರೋಗ್ಯವಾಗಿದ್ದರು. ಆದರೆ ರಾತ್ರಿ 9 ಗಂಟೆಗೆ ಮಹೇಂದ್ರ ಅವರು ಕೋಣೆಗೆ ಹೋದ ನಂತರ ಏನು ನಡೆದಿತು ಎಂಬುದು ಗೊತ್ತಿಲ್ಲ. ಇಂಜೆಕ್ಷನ್ ಕೊಟ್ಟಿದ್ದರೋ ಇಲ್ಲವೋ ಅದು ಗೊತ್ತಿಲ್ಲ ಎಂದು ಮುನಿರೆಡ್ಡಿ ಹೇಳಿದ್ದಾರೆ. ಮರುದಿನ ಬೆಳಗ್ಗೆ 7.30ಕ್ಕೆ ಮಹೇಂದ್ರ ಅವರು ಕೋಣೆಯಿಂದ ಕಿರುಚಿಕೊಂಡರು. ಮುನಿರೆಡ್ಡಿ ಅವರು ಮೇಲೆ ಹೋದಾಗ ಕೃತಿಕಾ ಜ್ಞಾನತಪ್ಪಿ ಬಿದ್ದಿದ್ದರು. ಅವರಲ್ಲಿ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ಮಹೇಂದ್ರ ಹೇಳಿದರು. ಕಾರಿನಲ್ಲಿ ಆಸ್ಪತ್ರೆಗೆ ಹೋದರೂ, ವೈದ್ಯರು ಕೃತಿಕಾ ಅವರು ಈಗಾಗಲೇ ಮೃತಪಟ್ಟಿದ್ದರು ಎಂದು ಘೋಷಿಸಿದರು.
ಮಹೇಂದ್ರ ಅವರು ಕೃತಿಕಾ ಅವರ ಸಾವಿಗೆ ‘ಲೋ ಶುಗರ್’ ಕಾರಣ ಎಂದು ಹೇಳಿದ್ದು ಸಂಪೂರ್ಣ ಸುಳ್ಳು ಎಂದು ಮುನಿರೆಡ್ಡಿ ಆರೋಪಿಸಿದ್ದಾರೆ. “ನಮ್ಮ ಮಗಳು ಸಂಪೂರ್ಣ ಆರೋಗ್ಯವಾಗಿದ್ದಳು. ಲೋ ಶುಗರ್ ಎಂಬ ವಿಚಾರ ಯಾಕೆ ಬಂದಿತು ಎಂಬುದು ತನಿಖೆಯಲ್ಲಿ ತಿಳಿಯುತ್ತದೆ,” ಎಂದು ಅವರು ಹೇಳಿದ್ದಾರೆ. ಮಹೇಂದ್ರ ಅವರು ತುಂಬಾ ವಿನಯವಂತರಾಗಿದ್ದರು ಎಂದು ಒಪ್ಪಿಕೊಳ್ಳುತ್ತಲೇ, ಅವರಿಗೆ ಬೇರೆ ಸಂಬಂಧಗಳು ಇರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಕೃತಿಕಾ ಅವರು ತಮ್ಮ ಗಂಡನೊಂದಿಗೆ ಚೆನ್ನಾಗಿಯೇ ಇದ್ದರು, ಮತ್ತು ಅವರು ಯಾವುದೇ ದೂರುಗಳನ್ನು ಹೇಳಿರಲಿಲ್ಲ ಎಂದು ಕೃತಿಕಾ ತಂದೆ ಹೇಳಿದ್ದಾರೆ.
ಮಹೇಂದ್ರ ಅವರು ದೊಡ್ಡ ಆಸ್ಪತ್ರೆಯನ್ನು ನಿರ್ಮಿಸುವ ಕನಸು ಹೊಂದಿದ್ದರು. “ನಾನು ದೊಡ್ಡ ಡಾಕ್ಟರ್ ಆಗಬೇಕು,” ಎಂದು ಅವರು ಹೇಳುತ್ತಿದ್ದರು. ಆದರೆ ಕೃತಿಕಾ ಅವರು “ಇನ್ನೂ ಅನುಭವ ಬೇಕು, ಸ್ವಲ್ಪ ದಿನಗಳ ನಂತರ ಮಾಡೋಣ,” ಎಂದು ಹೇಳಿದ್ದರು. ಆಸ್ಪತ್ರೆಗೆ ಹೋಗುವಾಗ ಮುನಿರೆಡ್ಡಿ ಅವರು, ಮಹೇಂದ್ರ ಅವರನ್ನು ಕೇಳಿದ್ದರು. “ನೀನೇ ಡಾಕ್ಟರ್ ಅಲ್ಲವೇ? ಬದುಕಿದ್ದಾಳಾ ಇಲ್ಲವಾ ನೀನೇ ಚೆಕ್ ಮಾಡಬಹುದಲ್ಲವೇ?” ಎಂದರು. ಅದಕ್ಕೆ ಮಹೇಂದ್ರ ಅವರು “ನನಗೆ ದಿಕ್ಕು ತೋಚುತ್ತಿಲ್ಲ,” ಎಂದು ಉತ್ತರಿಸಿದ್ದರು.
ಕೃತಿಕಾ ಅವರ ಸಾವಿನ ನಂತರ ಮುನಿರೆಡ್ಡಿ ಅವರು ತಮ್ಮ ಮಗಳಿಗೆ ಕೊಡಬೇಕಿದ್ದ ಸಾವಿರಾರು ಕೋಟಿ ಬೆಲೆಯ ಮನೆಯನ್ನು ದೇವರಿಗೆ ಒಪ್ಪಿಸಿದ್ದಾರೆ. “ಮಗಳು ಸಾವನ್ನಪ್ಪಿದ ನಂತರ ಆ ಮನೆಯನ್ನು ದೇವರಿಗೆ ಕೊಟ್ಟಿದ್ದೇನೆ,” ಎಂದು ಅವರು ಹೇಳಿದ್ದಾರೆ. ಘಟನೆಯ ನಂತರ ಮಹೇಂದ್ರ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಕೆಲಸವನ್ನು ಬಿಟ್ಟರು. ಯಾಕೆ ಎಂದು ಕೇಳಿದಾಗ “ಟ್ರೀಟ್‌ಮೆಂಟ್ ಕೊಡುವಾಗ ಕೈಕಾಲು ನಡುಗುತ್ತದೆ,” ಎಂದು ಹೇಳಿದ್ದರು. ಇದಲ್ಲದೆ, ಅವರು ಹೊಸ ಸಂಬಂಧವನ್ನು ಸ್ಥಾಪಿಸಿ ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡರು ಎಂದು ಹೇಳಿದ್ದಾರೆ.
ಪೊಲೀಸರು ಈ ಪ್ರಕರಣದಲ್ಲಿ ತುಂಬಾ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುನಿರೆಡ್ಡಿ ಅವರು ಗೌರವದಿಂದ ಹೇಳಿದ್ದಾರೆ. “ಅವರ ಮೇಲೆ ನಂಬಿಕೆ ಇದೆ, ನ್ಯಾಯ ದೊರಕಿಸಿಕೊಡುತ್ತಾರೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರು ತಿಂಗಳ ಕಾಲ ಪ್ರಾಥಮಿಕ ವರದಿಯಲ್ಲಿ ಯಾವುದೇ ಅನುಮಾನ ಬರಲಿಲ್ಲ. “ನಮಗೆ ತಿಳಿಯದೆ ಆರೋಪ ಮಾಡುವುದು ಸರಿಯಲ್ಲ,” ಎಂದು ಕಾಯ್ದಿದ್ದರು. ಆದರೆ FSL (ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ) ರಿಪೋರ್ಟ್ ಬಂದ ನಂತರ ದೂರು ದಾಖಲಿಸಿದ್ದಾರೆ.