ರೈಲಿನಡಿ ಬೀಳುತ್ತಿದ್ದ ಪ್ರಯಾಣಿಕನನ್ನು ದೇವರಂತೆ ರಕ್ಷಿಸಿದ ಸಿಬ್ಬಂದಿ: ವಿಡಿಯೋ ಇಲ್ಲಿದೆ

Untitled design 2025 06 24t115218.229

ಬೆಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ಹತ್ತಲು ಯತ್ನಿಸಿ ಆಯತಪ್ಪಿ ಬಿದ್ದ ಪ್ರಯಾಣಿಕನೊಬ್ಬನನ್ನು ರೈಲ್ವೆ ಸಿಬ್ಬಂದಿ ಮತ್ತು ಮಾಜಿ ಸೈನಿಕನ ರಕ್ಷಿಸಿದ್ದಾರೆ. ಈ ರೋಚಕ ಘಟನೆಯು ಬೆಂಗಳೂರಿನ ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್ 2 ರಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲು ವೇಗ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಮಾಜಿ ಸೈನಿಕ ಸತೀಶ್ ಮತ್ತು ರೈಲ್ವೆ ಸಿಬ್ಬಂದಿ ಪ್ರದೀಪ್ ಕುಮಾರ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈಲು ಫ್ಲಾಟ್‌ಫಾರ್ಮ್‌ನಿಂದ ಚಲಿಸಲು ಆರಂಭಿಸಿತ್ತು. ಈ ವೇಳೆ ಓರ್ವ ಪ್ರಯಾಣಿಕ, ರೈಲಿನಲ್ಲಿ ಹತ್ತಲು ಯತ್ನಿಸುತ್ತಿದ್ದಾಗ ಆಯತಪ್ಪಿ ರೈಲು ಮತ್ತು ಫ್ಲಾಟ್‌ಫಾರ್ಮ್‌ನ ಮಧ್ಯದ ಅಂತರಕ್ಕೆ ಬಿದ್ದಿದ್ದಾನೆ. ರೈಲು ಆತನನ್ನು ಎಳೆದುಕೊಂಡೇ ಸಾಗುತ್ತಿತ್ತು. ಇನ್ನೇನು ಆತ ರೈಲಿನ ಚಕ್ರದಡಿಗೆ ಸಿಲುಕುವ ಕ್ಷಣದಲ್ಲಿ, ಸತೀಶ್ ಮತ್ತು ಪ್ರದೀಪ್ ಕುಮಾರ್ ತಕ್ಷಣವೇ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಅವರ ಈ ಧೈರ್ಯದ ಕಾರ್ಯದಿಂದ ಪ್ರಯಾಣಿಕನ ಜೀವ ಉಳಿದಿದ್ದು, ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಈ ಇಬ್ಬರ ಶೌರ್ಯವನ್ನು ಕೊಂಡಾಡಿದ್ದಾರೆ. ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆ ಮತ್ತು ಮಾಜಿ ಸೈನಿಕನ ಸಮಯಪ್ರಜ್ಞೆಯಿಂದ ಒಂದು ದೊಡ್ಡ ದುರಂತ ತಪ್ಪಿದೆ.

Exit mobile version